Thursday, August 11, 2022

Latest Posts

ದೇಶದ ಕೃಷಿ ವಲಯದಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆ: ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಳಲಿ

ಬಾಗಲಕೋಟೆ: ರೈತರ ಉತ್ಪನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ, ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವುದು ದೇಶದ ಮತ್ತು ರೈತರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅನುಷ್ಠಾನಕ್ಕೆ ತಂದಿದ್ದಾರೆ. ಈ ಎರಡೂ ಮಸೂದೆಯಿಂದ ದೇಶದ ಕೃಷಿ ವಲಯದಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆ ದೇಶದಲ್ಲಿ ಆಗಲಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಳಲಿ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಕಲ್ಯಾಣಕ್ಕಾಗಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ನೂತನ ಮಸೂದೆಗಳನ್ನು ಮೊದಲು ಪ್ರತಿಪಕ್ಷದವರು ಪೂರ್ಣ ಅಧ್ಯಯನ ಮಾಡಬೇಕು. ಸುಖಾಸುಮ್ಮನೇ ಮಸೂದೆ ಕುರಿತು ದೇಶದ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಬಾರದು. ಮಸೂದೆ ಸಂಪೂರ್ಣ ಅಧ್ಯಯನ ಮಾಡಿದ ಬಳಿಕ ಮಾತನಾಡಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆಯಿಂದ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ತಮಗಿಷ್ಟ ಬಂದ ಕಡೆ ಕೃಷಿ ಉತ್ಪನ್ನ ಮಾರಾಟ ಮಾಡಲು ಹಾಗೂ ಖರೀದಿಸಲು ಸ್ವಾತಂತ್ರ್ಯವನ್ನು ನೀಡಲಾಗಿದೆ. ಬೆಳೆಗಳ ನ್ಯಾಯಯುತ ದರ ನಿಗದಿಪಡಿಸಲು ನೆರವು ನೀಡಲಾಗಿದೆ. ಕೃಷಿ ಉತ್ಪನ್ನಗಳ ಪಾರದರ್ಶಕ, ತಡೆರಹಿತ ಅಂತರರಾಜ್ಯ ಹಾಗೂ ರಾಜ್ಯದೊಳಗಿನ ವ್ಯಾಪಾರಕ್ಕೆ ಉತ್ತೇಜನ ನೀಡಲಾಗಿದೆ. ಆನಲೈನ್ ವ್ಯಾಪಾರಕ್ಕೂ ಕೂಡ ಕಾನೂನಾತ್ಮಕ ಚೌಕ್ಟಟ್ಟನ್ನು ಅಳವಡಿಸಲಾಗಿದೆ ಇದರಿಂದ ರೈತರಿಗೆ ಸಾಕಷ್ಟು ಉಪಯುಕ್ತವಾಗಲಿದೆ ಎಂದು ಹೇಳಿದರು.
ರೈತರಿಗೆ ಮೋಸವೆಸಗುತ್ತಿದ್ದ ಮಧ್ಯವರ್ತಿಗಳು, ಖರೀದಿದಾರರ ಪರವಾಗಿದ್ದ ಪಕ್ಷಗಳು ಈ ರೈತ ಪರ ಕಾಯ್ದೆಯನ್ನು ವಿರೋಧಿಸುತ್ತಿವೆ. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೇ ದೇಶದ ಯಾವುದೇ ಭಾಗದಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ವ್ಹಿ.ನಾಯ್ಕರ ಹೇಳಿದರು.
ರೈತರ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆಯಿಂದ ಕೃಷಿ ಉದ್ಯಮ ಸಂಸ್ಥೆಗಳು, ಸಗಟು, ವ್ಯಾಪಾರಿಗಳು, ರಫ್ತುದಾರರು, ಚಿಲ್ಲರೆ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸಲು ರೈತರಿಗೆ ಭದ್ರತೆ ಹಾಗೂ ಪ್ರೋತ್ಸಾಹ ನೀಡುವ ಕೃಷಿ ಒಪ್ಪಂದಗಳ ಕುರಿತು ರಾಷ್ಟ್ರೀಯ ಚೌಕಟ್ಟು ನಿರ್ಮಿಸುವ ಧ್ಯೇಯವನ್ನು ಹೊಂದಿದೆ ಎಂದರು.
ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಣ್ಣ ಹೆರಕಣ್ಣವರ, ಉಪಾಧ್ಯಕ್ಷ ಆರ್.ಟಿ.ಪಾಟೀಲ, ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಮಲ್ಲಯ್ಯ ಮೂಗನೂರಮಠ ಪತ್ರಿಕಾಗೋಷ್ಠಿಯಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss