Thursday, August 11, 2022

Latest Posts

ದೇಶದ ಭದ್ರತೆಗೆ ಅಪಾಯಕಾರಿ ಆಗಿರುವವರ ಬಗ್ಗೆ ತಪಾಸಣೆ ಅಗತ್ಯ: ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್

ಉಡುಪಿ: ಕಡಲತಟದಲ್ಲಿ ಅಪಾಯಕಾರಿ ವ್ಯಕ್ತಿಗಳ ಬಗ್ಗೆ ಹೆಚ್ಚು ನಿಗಾ ವಹಿಸುತ್ತೇವೆ, ಮೀನುಗಾರಿಕೆಗೆ ಸಂಬಂಧಿಸದ, ದೇಶದ ವಿರೋಧಿ ಚಟುವಟಿಕೆ ಮಾಡವವರನ್ನು ಗುರುತಿಸುವ ಕೆಲಸ ಮಾಡುತ್ತೇವೆ ಎಂದು ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅವರು ಮಂಗಳವಾರ ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರ ಕಚೇರಿಗೆ ಭೇಟಿ ನೀಡಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕರಾವಳಿಯಲ್ಲೀಗ ಹೊರಜಿಲ್ಲೆ, ಹೊರ ರಾಜ್ಯದ ಮತ್ಸ್ಯ ಕಾರ್ಮಿಕರಾಗಿದ್ದಾರೆ. ಇವರ ಮಧ್ಯೆ ಬೇರೆ ದೇಶದವರೇನಾದರೂ ಇದ್ದಾರಾ ಎಂಬುದನ್ನೂ ಪರಿಶೀಲಿಸಬೇಕಿದೆ. ಅದಕ್ಕಾಗಿ ಬೋಟ್ ಮಾಲೀಕರ, ಕಾರ್ಮಿಕರ ಸಂಪೂರ್ಣ ವಿವರಗಳನ್ನು ಸಂಗ್ರಹ ಮಾಡುತ್ತೇವೆ. ಅಲ್ಲದೇ ರಾಜ್ಯದ 322 ಕಿ.ಮೀ. ಸಮುದ್ರ ತಟದಲ್ಲಿರುವ ಎಲ್ಲರ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ದೇಶದ ಭದ್ರತೆಗೆ ಅಪಾಯಕಾರಿ ಆಗಿರುವವರ ಬಗ್ಗೆ ತಪಾಸಣೆ ಮಾಡಬೇಕಿದೆ. ಸಮುದ್ರಕ್ಕೆ ಹೋಗುವವರ ಮತ್ತು ಬರುವವರ ನಿಖರ ಲೆಕ್ಕಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದರು.
ತಿಂಗಳಲ್ಲಿ ಬರಲಿವೆ 3 ಜೆಟ್‌ಸ್ಕೀ ಬೋಟ್
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ರಾಜ್ಯದ ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕರಾವಳಿ ಕಾವಲು ಪೊಲೀಸ್‌ಗೆ ಅಗತ್ಯ ಉಪಕರಣಗಳ ಖರೀದಿ, ಪ್ರತ್ಯೇಕ ಸಿಬ್ಬಂದಿ ನೇಮಕ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅರಬ್ಬಿ ಸಮುದ್ರದ ದಡ ಬಹಳ ಸೂಕ್ಷ್ಮ ಪ್ರದೇಶ. ಸಿಎಸ್ಪಿ ವಿಭಾಗವನ್ನು ಬಲ ಪಡಿಸಲು ಈಗಾಗಲೇ 3 ಹೊಸ ಜೆಟ್ ಸ್ಕೀಗಳನ್ನು ಖರೀದಿ ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ ಬರಲಿವೆ ಎಂದ ಭಾಸ್ಕರ್ ರಾವ್, ಸಿಬ್ಬಂದಿಯಲ್ಲಿ ದೈಹಿಕ, ತಾಂತ್ರಿಕ, ಭಾವನಾತ್ಮಕ ದೃಢತೆ ಹೆಚ್ಚಿಸುವ ಸಲುವಾಗಿ ಅವರ ಕಾರ್ಯ ಕ್ಷಮತೆ ಹೆಚ್ಚಿಸಲು ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಕರಾವಳಿಯ 43 ಬೀಚ್‌ಗಳಲ್ಲಿ ಭದ್ರತೆ
ಕರಾವಳಿ ಕಾವಲು ಪೊಲೀಸ್ ಎಂಬುದು ಪಾರ್ಕಿಂಗ್ ಪ್ಲೇಸ್ ಆಗಬಾರದು. ದೇಶದ ಭದ್ರತೆಯಲ್ಲಿ ಸಿಎಸ್ಪಿ ಜವಾಬ್ದಾರಿ ದೊಡ್ಡದಿದೆ. 43 ಬೀಚ್‌ಗಳಲ್ಲಿ ಭದ್ರತೆಗೆ ಅವಕಾಶವಿದೆ. ಈಗಾಗಲೇ ಸಿಎಸ್ಪಿಯು ಕರಾವಳಿ ನಿಯಂತ್ರಣ ದಳ ಮತ್ತು ಸಾಗರ ರಕ್ಷಕ ದಳವನ್ನು ರಚಿಸಿದೆ. ಗೃಹರಕ್ಷಕ ದಳದವರು ಮತ್ತು ಸ್ಥಳೀಯ ಮೀನುಗಾರರು ಇದರಲ್ಲಿದ್ದಾರೆ. ಭದ್ರತೆ ಮಾತ್ರವಲ್ಲದೇ ಮೀನುಗಾರರ ರಕ್ಷಣೆಗೆ ಜೊತೆಗೆ ಸಮುದ್ರದಲ್ಲಿನ ಜೀವ ವೈವಿಧ್ಯ ರಕ್ಷಣೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದರು.
ಈ ಸಂದರ್ಭದಲ್ಲಿ ಕರಾವಳಿ ಕಾವಲು ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಆರ್. ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss