Tuesday, August 16, 2022

Latest Posts

ದೇಶದ 2,500 ಆಯುರ್ವೇದ ಆಸ್ಪತ್ರೆಗಳು ಆಯುಷ್ಮಾನ್ ಯೋಜನೆಗೆ

ದಿಗಂತ ವರದಿ, ಮಂಗಳೂರು:

ಪ್ರಾಚೀನ ಆಯುರ್ವೇದ ಗ್ರಂಥಗಳ ಪುನರ್‌ರಚನೆ ಒಳಗೊಂಡಂತೆ ಆಯುಷ್ ವೈದ್ಯಕೀಯ ವಿಭಾಗದ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದಿರುವ ಕೇಂದ್ರ ಆಯುಷ್ ಇಲಾಖೆ ಸಚಿವ ಶ್ರೀಪಾದ ಯೆಸ್ಸೋ ನಾಯಕ್ ಅವರು,  ಇದೇ ವೇಳೆ  ದೇಶದ 2,500 ಆಯುರ್ವೇದ ಆಸ್ಪತ್ರೆಗಳನ್ನು ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಅವರು ಇಲ್ಲಿನ ತಣ್ಣೀರುಹಳ್ಳದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಆಯುರ್ವೇದ ಕಾಲೇಜಿನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳ ಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ‘ಶರಾಯು’ವಿನ ಸಮಾರೋಪ ಸಮಾರಂಭದಲ್ಲಿ , ಶಾಂರ‍್ಗಧರ ಸಂಹಿತೆ ಗ್ರಂಥದ ಆಂಗ್ಲ ಭಾಷಾಂತರ ಕೃತಿ ‘ಶರಾಯು’ವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ದೇಶೀಯ ವೈದ್ಯಕೀಯ ಶಿಕ್ಷಣದ ಸುಧಾರಣೆ ಮತ್ತು ಸಂಶೋಧನೆಗೆ ಆಯುಷ್ ಇಲಾಖೆ ಒತ್ತು ನೀಡಿದೆ. ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ದೇಶದ 2,500 ಆಯುರ್ವೇದ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಲಾಗಿದ್ದು, ದೇಶೀಯ ವೈದ್ಯಪದ್ಧತಿಯ ಮೂಲಕ ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಬಲಗೊಳಿಸಲಾಗುತ್ತಿದೆ ಎಂದರು.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಸ್. ಸಚ್ಚಿದಾನಂದ ಮಾತನಾಡಿ, ಆಯುಷ್ ಚಿಕಿತ್ಸಾ ಪದ್ಧತಿಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಿ ಗಮನ ಸೆಳೆದಿದೆ ಎಂದರು.

ಶಾಸಕರ ಪ್ರೀತಂ ಜೆ. ಗೌಡ, ಆಯುರ್ವೇದ ತಜ್ಞ ಲೇಖಕ ಡಾ. ಶ್ರೀರಾಮ ಎಸ್. ಸಾವ್ರೀಕರ್, ಎಸ್‌ಡಿಎಂ ವಿದ್ಯಾಸಂಸ್ಥೆಗಳ ಯೋಜನಾ ನಿರ್ದೇಶಕ ಡಿ. ಶ್ರೇಯಸ್ ಕುಮಾರ್, ಎಸ್‌ಡಿಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ. ಪ್ರಸನ್ನ ಎನ್. ರಾವ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಅಲೋಪಥಿ ರಂಗದ ನಿಲುವಿಗೆ ಡಾ. ಹೆಗ್ಗಡೆ ಖೇದ: ಕಾರ್ಯಕ್ರಮದಲ್ಲಿ  ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ, ಎಸ್‌ಡಿಎಂ ಸಂಸ್ಥೆಗಳ ಅಧ್ಯಕ್ಷರೂ ಆಗಿರುವ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿರುವುದು ಸಮರ್ಥನೀಯ.

ಆಯುರ್ವೇದ ಪದ್ಧತಿಯಲ್ಲಿ ಬರುವ ‘ಶಲ್ಯತಂತ್ರ’ವನ್ನು ಅಧ್ಯಯನ ನಡೆಸಿ, ತರಬೇತಿ ಪಡೆದ ಆಯುರ್ವೇದ ವೈದ್ಯರು ಅದೇ ಪದ್ಧತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಸರಕಾರ ಅನುಮತಿಸಿರುವುದು ಸರಿಯಾಗಿಯೇ ಇದೆ ಎಂದರು. ಇದು ದೇಶೀಯ ವೈದ್ಯ ಪರಂಪರೆಯ ಭಾಗವೇ ಆಗಿದೆ. ಆದರೆ ಇದಕ್ಕೆ ಅಲೋಪಥಿ ವೈದ್ಯರು ತಕರಾರೆತ್ತಿರುವುದಕ್ಕೆ ಅವರು ಖೇದ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss