ಹೊಸದಿಗಂತ ವರದಿ, ಮಂಗಳೂರು:
ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಜ.15ರಿಂದ ಫೆ.27ರವರೆಗೆ ದೇಶಾದ್ಯಂತ ದೇಣಿಗೆ ಸಂಗ್ರಹ ಕಾರ್ಯ ನಡೆಯಲಿದೆ. ರಾಮಭಕ್ತರು ತಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಣಿಗೆ ನೀಡುವ ಮೂಲಕ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಅಂಗವಾಗಿ ನಗರದ ಕದ್ರಿಯಲ್ಲಿರುವ ವಿಶ್ವಹಿಂದು ಪರಿಷತ್ ಕಾರ್ಯಾಲಯ ‘ವಿಶ್ವಶ್ರೀ’ಯಲ್ಲಿ ನಿಧಿ ಸಮರ್ಪಣೆಯ ಮಂಗಳೂರು ಕಾರ್ಯಾಲಯ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಜ.15ರಿಂದ ದೇಶದ ಮೂಲೆ ಮೂಲೆಯಲ್ಲಿ ಮನೆಮನೆಗೆ ತೆರಳಿ ರಾಮಮಂದಿರ ನಿರ್ಮಾಣಕ್ಕಾಗಿ 45 ದಿನಗಳ ಕಾಲ ಧನ ಸಂಗ್ರಹ ಕಾರ್ಯ ನಡೆಯಲಿದೆ. ಪ್ರತಿ ವ್ಯಕ್ತಿ ಕನಿಷ್ಟ 10ರೂ., ಒಂದು ಮನೆಯಿಂದ 100 ರೂ. ನೀಡಬೇಕು. ಗರಿಷ್ಠ ಮೊತ್ತ ಅವರವರ ಶಕ್ತಿ -ಸಾಮರ್ಥ್ಯಕ್ಕೆ ಬಿಟ್ಟದ್ದು. ರಾಮಮಂದಿರ ನಮ್ಮ ಸ್ವಾಭಿಮಾನದ ಪ್ರತೀಕ, ಗೌರವದ ಸಂಕೇತ. ದೇಣಿಗೆ ನೀಡುವ ಮೂಲಕ ಮಂದಿರ ನಿರ್ಮಾಣದಲ್ಲಿ ನಾವೂ ಕೈಜೋಡಿಸಿದ ಸಂತೃಪ್ತಿ ಹೊಂದಬಹುದು ಎಂದರು.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚನೆಗೊಂಡು ಶತಶತಮಾನದ ಕನಸು ನನಸಾಗುತ್ತಿದೆ. ರಾಮ ಮಂದಿರ ಯಾರೋ ಒಬ್ಬರ ದೇಣಿಗೆಯಿಂದ ನಿರ್ಮಾಣವಾಗಬಾರದು. ದೇಶದ ಎಲ್ಲ ರಾಮಭಕ್ತರ ದೇಣಿಗೆಯೂ ಸೇರಬೇಕು ಎಂಬ ನೆಲೆಯಲ್ಲಿ ರಾಮಾಯಣದಲ್ಲಿ ಸೇತುವೆ ನಿರ್ಮಾಣಕ್ಕೆ ಅಳಿಲು ತನ್ನ ಸೇವೆ ಸಲ್ಲಿಸಿದಂತೆ ನಾವೆಲ್ಲರೂ ಮಂದಿರ ನಿರ್ಮಾಣಕ್ಕೆ ಅಳಿಲ ಸೇವೆ ಸಲ್ಲಿಸೋಣ ಎಂದು ಶ್ರೀಗಳು ಹೇಳಿದರು.
ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ, ಕುಶ ಮಹಾರಾಜನಿಂದ ನಿರ್ಮಿತವಾದ ಅಯೋಧ್ಯೆಯ ಶ್ರೀರಾಮ ಮಂದಿರ ಬಾಬರ್ನಿಂದ ನೆಲಸಮಗೊಂಡಿತ್ತು. ಬಳಿಕ ದೇಶವನ್ನು ಧರ್ಮದ ನೆಲೆಯಲ್ಲಿ ಒಟ್ಟುಗೂಡಿಸಿದ ಆಂದೋಲನವಾಗಿ ರಾಮಜನ್ಮಭೂಮಿ ಆಂದೋಲನ ರೂಪು ತಳೆಯಿತು. ಲೋಕಸಭೆಯಲ್ಲಿ ಇಬ್ಬರು ಸಂಸದರಿದ್ದ ಬಿಜೆಪಿ ಅಧಿಕಾರಕ್ಕೆ ಏರಲು ರಾಮಜನ್ಮಭೂಮಿ ಆಂದೋಲನ ಕಾರಣ. ಇದೀಗ ಮಂದಿರ ನಿರ್ಮಾಣದ ಕಾಲ ಕೂಡಿಬಂದಿದೆ. ದೇಶದ ಪ್ರತಿ ರಾಮಭಕ್ತನ ಕಾಣಿಕೆ ಮಂದಿರ ನಿರ್ಮಾಣಕ್ಕೆ ಸಲ್ಲಿಕೆಯಾಗಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾಂತ ಸಹ ಸಂಘಚಾಲಕ ಡಾ. ವಾಮನ ಶೆಣೈ, ವಿಭಾಗ ಸಂಘಚಾಲಕ ಗೋಪಾಲ ಚೆಟ್ಟಿಯಾರ್, ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಉಪಸ್ಥಿತರಿದ್ದರು.
ಕುಟುಂಬ ಪ್ರಬೋಧನ ಅಖಿಲ ಭಾರತ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪ್ರಮುಖರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕೃಷ್ಣಮೂರ್ತಿ ಎಂ., ಪಿ.ಎಸ್. ಪ್ರಕಾಶ್, ಡಾ. ಸತೀಶ್ ರಾವ್, ಸುನೀಲ್ ಆಚಾರ್, ಗೋಪಾಲ ಕುತ್ತಾರ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಭಾಗವಹಿಸಿದ್ದರು.