ಹೊಸದಿಲ್ಲಿ: ದೇಶೀಯ ಕಂಪೆನಿಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವ ಚೀನಾದ ಹುನ್ನಾರವನ್ನು ತಡೆಯಲು ಈಗಾಗಲೇ ನೆರೆಯ ದೇಶಗಳಿಂದ ಬರುವ ಎಫ್ಡಿಐ ಮೇಲೆ ನಿರ್ಬಂಧ ಹೇರಿರುವ ಕೇಂದ್ರ ಸರಕಾರ, ಇದೀಗ ಚೀನಾದ ಫೋರ್ಟ್ಫೋಲಿಯೊ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗೆ ಎಗ್ಗಿಲ್ಲದೆ ಲಗ್ಗೆ ಇಡುವುದನ್ನು ತಡೆಗಟ್ಟಲೂ ಮುಂದಾಗಿದೆ.ಈ ನಿಟ್ಟಿನಲ್ಲಿ ದೇಶೀಯ ಲಿಸ್ಟೆಡ್ ಕಂಪೆನಿಗಳಲ್ಲಿ ಶೇರುಗಳನ್ನು ಖರೀದಿಸಲು ಗಡಿಯಾಚೆಗಿನ ಹೂಡಿಕೆದಾರರು ಬಳಸಿಕೊಳ್ಳುತ್ತಿರುವ ಕಾನೂನಿನಲ್ಲಿನ ಲೋಪದೋಷಗಳನ್ನು ನಿವಾರಿಸಲು ಸರಕಾರ ಚಿಂತನೆ ನಡೆಸಿದೆ.
ಇದರ ಅಂಗವಾಗಿ, ಚೀನಾದ ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆ (ಎಫ್ಪಿಐ)ಗಾಗಿ ಅನುಮತಿ ಕಡ್ಡಾಯಗೊಳಿಸುವ ಸಾಧ್ಯತೆ ಸಹಿತ ವಿವಿಧ ಆಯ್ಕೆಗಳ ಬಗ್ಗೆ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಪರಿಶೀಲಿಸುತ್ತಿದೆ.
ಎಫ್ಪಿಐ ಹೂಡಿಕೆದಾರರು ವಿಶೇಷವಾಗಿ ಸಣ್ಣ ಶೇರುಗಳನ್ನು ಖರೀದಿಸುತ್ತಾರೆ.ಬಳಿಕ ತಮ್ಮ ಹೂಡಿಕೆಯನ್ನು ಹೆಚ್ಚಿಸುತ್ತಾ ಹೋಗುತ್ತಾರೆ.ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿಯೊಂದಿಗೆ ಸಮಾಲೋಚಿಸಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿದೆ.ಎಫ್ಡಿಐ ಮಾರ್ಗದ ಮೂಲಕ ತಡೆಯಲ್ಪಟ್ಟಿರುವ ಹೂಡಿಕೆದಾರರ ಗುಂಪೊಂದು ಕಂಪೆನಿಯಲ್ಲಿ ಗಣನೀಯ ಪ್ರಭಾವಗಳಿಸಲು ಎಫ್ಪಿಐ ಮಾರ್ಗವನ್ನು ಬಳಸದಂತೆ ನೋಡಿಕೊಳ್ಳುವುದು ಸರಕಾರದ ಉದ್ದೇಶವಾಗಿದೆ. ವಿವಿಧ ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಬಹುರಾಷ್ಟ್ರೀಯ ಕಂಪೆನಿಗಳ ಶೇರುಗಳನ್ನು ಖರೀದಿಸಿ ಚೀನಾ ಅವುಗಳ ಮೇಲೆ ಹಿಡಿತ ಸಾಸುತ್ತಿರುವಾಗಲೇ ಕೇಂದ್ರ ಸರಕಾರ ಮುಂಚಿತವಾಗಿಯೇ ಎಚ್ಚರಿಕೆ ವಹಿಸಿ ಕ್ರಮಕ್ಕೆ ಮುಂದಾಗಿರುವುದು ಗಮನ ಸೆಳೆದಿದೆ.