Tuesday, August 16, 2022

Latest Posts

ದೇಶ ಅಭಿವೃದ್ಧಿ ಪಥದತ್ತ ಸಾಗಲು ಯುವಶಕ್ತಿಯ ಬಳಕೆ ಅತ್ಯಗತ್ಯ : ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ಹೊಸ ದಿಗಂತ ವರದಿ, ಚಿತ್ರದುರ್ಗ:

ಇಂದಿನ ಜಾಗತೀಕರಣ ಜಗತ್ತಿನಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ, ದೇಶದಲ್ಲಿನ ಯುವಶಕ್ತಿ ಸದೃಢವಾಗಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.
ರುಡ್‌ಸೆಟ್ ಸಂಸ್ಥೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವಕರ ಸಂಪತ್ತು ದೇಶದ ಸಂಪತ್ತು. ನಮ್ಮ ಈ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯುವ ಜನತೆಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಕೆಲಸವಾಗಬೇಕು ಎಂದು ಹೇಳಿದರು.
ಯುವಕರು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಇದಕ್ಕಾಗಿ ನಿರಂತರ ಪ್ರಯತ್ನ ಮಾಡಬೇಕು. ನಾನು ಸಮುದ್ರವನ್ನು ಈಜಿ ದಾಟಬಲ್ಲೆ. ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತದೆ ಎಂದು ಅಪಾರ ಇಚ್ಛಾಶಕ್ತಿಯುಳ್ಳ ಪ್ರಯತ್ನಶೀಲನು ಹೇಳುತ್ತಾನೆ. ಇಂತಹ ಶಕ್ತಿಯನ್ನು ಛಾತಿಯನ್ನು ಪಡೆಯಿರಿ. ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ ಎಂದರು.
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯಂತೆ ಸ್ವಾವಲಂಬಿ ಜೀವನ ನಡೆಸಬೇಕು. ಬದುಕಿಗೆ ಪೂರಕವಾಗುವಂತಹ ಸ್ವ ಉದ್ಯೋಗದ ಬದುಕನ್ನು ಪ್ರೇರೆಪಿಸುವ ಉದ್ದೇಶಕ್ಕೆ ಪೂರಕವಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ರುಡ್‌ಸೆಟ್ ಸಂಸ್ಥೆಯಲ್ಲಿ ಅಲ್ಪಾವಧಿಯ ತರಬೇತಿ ಕಾರ್ಯಕ್ರಮಗಳು, ಪ್ರದಾನಿ ನರೇಂದ್ರ ಮೋದಿಯವರ ಸಂಕಲ್ಪ ಆತ್ಮ ನಿರ್ಭರ ಭಾರತ – ಸ್ವಾಬಿಮಾನದ ಬದುಕನ್ನು ಪ್ರೇರೆಪಿಸುವುದಕ್ಕೆ ನೆರವಾಗುತ್ತವೆ ಎಂದು ಹೇಳಿದರು.
ನೆಮ್ಮದಿಯ ಬದುಕಿಗೆ ದುಡಿಮೆ ಕಾರಣ, ಆದಾಯ ತರುವಂತಹ ಚಟುವಟಿಕೆಗಳಲ್ಲಿ ತೊಡಗಿ ಸಮುದಾಯದ ಶಕ್ತಿ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಾಜದ ಅತ್ಯುತ್ತಮ ಯುವಶಕ್ತಿಯಾಗಿ ಬೆಳೆಯಿರಿ. ಯಶಸ್ಸನ್ನು ಸಾಧಿಸಲು ಪ್ರೇರಣೆ ಮತ್ತು ಪೂರಕವಾದ ತಿಳುವಳಿಕೆ ದೊರೆಯಲು ಇಂತಹ ತರಬೇತಿ ಕಾರ್ಯಗಾರಗಳು ಅವಶ್ಯಕತೆಯಾಗಿದ್ದು, ಬದುಕಿನಲ್ಲಿ ರೂಢಿಸಿಕೊಳ್ಳಿರಿ ಎಂದು ಆಶಿಸುತ್ತಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿ.ಬಿ.ಹಿರೇಮಠ್, ಕೆನರಾ ಬ್ಯಾಂಕ್ ಮುಖ್ಯ ಪ್ರಬಂದಕರಾದ ಟಿ.ಸಾಯಿಕುಮಾರ್ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆ ನಿರ್ದೇಶಕರಾದ ಜಿ.ಮಂಜುಳಾ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕಿ ಲತಾಮಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಂಪ್ಯೂಟರ್ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಹಾಗೂ ಬ್ಯೂಟಿಪಾರ್ಲರ್ ತರಬೇತಿ ಸೇರಿದಂತೆ ಒಟ್ಟು ೭೫ ಜನ ಶಿಬಿರಾರ್ಥಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss