ಉಡುಪಿ: ದೇಶ ವಿರೋಧಿ ಚಟುವಟಿಕೆ ಮಾಡುವವರು ಎಲ್ಲೇ ಇದ್ದರೂ ಅವರನ್ನು ಪತ್ತೆಹಚ್ಚುತ್ತೇವೆ. ಸ್ಯಾಟಲೈಟ್ ಫೋನ್ ಬಳಸಿದವರ ತನಿಖೆ ನಡೆಯುತ್ತಿದೆ ಎಂದು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.
ಮಂಗಳವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕರಾವಳಿ ಭಾಗವೂ ಸಹಿತ ರಾಜ್ಯದಲ್ಲಿ ಸ್ಯಾಟಲೈಟ್ ಫೋನ್ಗಳನ್ನು ಯಾರು ಬಳಸಿದ್ದಾರೆ ಎಂಬುದನ್ನು ಪತ್ತೆ ಮಾಡುತ್ತೇವೆ. ಪ್ರಕರಣ ತನಿಖಾ ಹಂತದಲ್ಲಿದೆ. ಆದ್ದರಿಂದ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ ಎಂದರು.
ಸುರಕ್ಷಿತವಾಗಿದೆ ಕರಾವಳಿ ಪ್ರದೇಶ
ಭಾರತೀಯ ನೌಕಾ ದಳ, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಎಲ್ಲರ ನಿಗಾ ಹಾಗೂ ಭದ್ರತೆಯೊಂದಿಗೆ ಕರಾವಳಿ ಪ್ರದೇಶ ಸುರಕ್ಷಿತವಾಗಿದೆ. ಆದರೆ ಸುರಕ್ಷಿತವಾಗಿದೆ ಎಂದ ಮಾತ್ರಕ್ಕೆ ನಿರಾಳವಾಗಿರಲು ಸಾಧ್ಯವಿಲ್ಲ. ನಮ್ಮ ನಿಗಾವನ್ನು ಇನ್ನಷ್ಟು ಹೆಚ್ಚಿಸುತ್ತೇವೆ. ಸ್ಥಳೀಯರ ಸಹಕಾರವನ್ನು ಪಡೆಯುತ್ತೇವೆ. ಮೀನುಗಾರರು ಸಮುದ್ರದಲ್ಲಿ ಬದುಕು ಕಟ್ಟಿಕೊಂಡವರು, ನಾವು ಕಲಿತು ಸಮುದ್ರವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಭಾಸ್ಕರ್ ರಾವ್ ಹೇಳಿದರು.
ಸೋಶಿಯಲ್ ಮೀಡಿಯಾ ದೊಡ್ಡ ಸವಾಲು
ಆಂತರಿಕ ಭದ್ರತೆಗೆ ಸೋಶಿಯಲ್ ಮೀಡಿಯ ದೊಡ್ಡ ಸವಾಲಾಗಿದೆ. ಇದು ಹಿಟ್ ಆ್ಯಂಡ್ ರನ್ ಕೇಸ್, ಯಾರೋ ಮನೆಯಲ್ಲಿ ಕೂತು ಸ್ಟೇಟಸ್ ಹಾಕಿ, ಊರಿಡಿ ಬೆಂಕಿ ಹಚ್ಚಿಬಿಡುತ್ತಾರೆ. ಅದಕ್ಕಾಗಿ ಆಂತರಿಕ ಭದ್ರತಾ ವಿಭಾಗದೊಳಗೆ ಸೋಶಿಯಲ್ ಮೀಡಿಯಾ ಸೆಲ್ ಸಹಿತ ಅಗತ್ಯ ಸಿಬ್ಬಂದಿ ಇದ್ದಾರೆ. ಆದ್ದರಿಂದ ಯಾರು ಆ ರೀತಿ ಮಾಡುತ್ತಾರೋ ಅವರನ್ನು ಪತ್ತೆಹಚ್ಚಿ, ಕಾನೂನು ರೀತಿ ಕ್ರಮಕೈಗೊಳ್ಳಲು ಸರಕಾರ ಅಧಿಕಾರಕೊಟ್ಟಿದೆ. ಅದರಂತೆ ಕರ್ತವ್ಯ ಮಾಡುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದರು.