Wednesday, July 6, 2022

Latest Posts

ದೈಹಿಕ‌ ಆರೋಗ್ಯದಂತೆ ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಿ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಕೊರೋನಾ ಸಾಂಕ್ರಮಿಕದ ಸಮಯದಲ್ಲಿ ಜನರು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ
ಕಾಳಜಿ ವಹಿಸಬೇಕು. ಯಾವುದೇ ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರದ ಆಪ್ತ ಸಮಾಲೋಚನೆ ಸೇವೆ ಪಡೆಯಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ದಿನ ಆಚರಣೆಯಾಗುತ್ತಿದ್ದು, ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಸಾರ್ವಜನಿಕರಿಗೆ ಅವರು ಮನವಿ ಮಾಡಿದ್ದಾರೆ.
“ಆತ್ಮಹತ್ಯೆ, ಹುಚ್ಚು ಹಿಡಿಯುವುದು, ಖಿನ್ನತೆಗೆ ಒಳಗಾಗುವುದು ಮೊದಲಾದ ಪರಿಣಾಮಗಳು ಮಾನಸಿಕ ಒತ್ತಡದಿಂದ ಕಂಡುಬರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ, ಭಾರತದಲ್ಲಿ ಶೇ.7.5ರಷ್ಟು ಜನರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೊತೆಗೆ ಜಗತ್ತಿನ ಒಟ್ಟು ಮಾನಸಿಕ ಅನಾರೋಗ್ಯಗಳಲ್ಲಿ ಶೇ.15ರಷ್ಟು ಭಾರತದಲ್ಲೇ ಇದೆ. 2020ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯ ಶೇ.20ರಷ್ಟು ಜನರು ಮಾನಸಿಕ ಅನಾರೋಗ್ಯದಿಂದ ಬಳಲಬಹುದು ಎಂದು ಅಂದಾಜು ಮಾಡಲಾಗಿತ್ತು. ಇಂತಹ ಆತಂಕಕಾರಿ ಬೆಳವಣಿಗೆಯ ಹಿನ್ನೆಲೆಯಲ್ಲಿ ಜನರು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.
“ರಾಜ್ಯದಲ್ಲಿ ಮಾನಸಿಕ ಆರೋಗ್ಯ ಕಾಪಾಡಲೆಂದೇ ಮಾನಸಿಕ ಆರೋಗ್ಯ ವಿಭಾಗವಿದೆ. ಈ ವಿಭಾಗದಿಂದ ಈವರೆಗೆ 7,13,867 ಜನರಿಗೆ ಆಪ್ತ ಸಮಾಲೋಚನೆ ಸೇವೆ ನೀಡಲಾಗಿದೆ. ನಮ್ಮ ಕೊರೋನಾ ವಾರಿಯರ್ ಗಳಾದ ವೈದ್ಯರು, ನರ್ಸ್ ಗಳು, ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಆಪ್ತ ಸಮಾಲೋಚನೆ ಸೇವೆ ಬಳಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.
ಕೋವಿಡ್ ಸಂಕಷ್ಟ
ಕೋವಿಡ್‍ನಿಂದ ಆರ್ಥಿಕ ಸಂಕಷ್ಟದಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರಿಗೆ ವೇತನ ಕಡಿತವಾಗಿದೆ. ಅನೇಕರು ಉದ್ಯೋಗ ಇದ್ದರೂ ಮನೆಯಲ್ಲೇ ಕೆಲಸ ಮಾಡುವುದರಿಂದ ಒತ್ತಡಕ್ಕೊಳಗಾಗಿದ್ದಾರೆ. ಇಂತಹ ಸಂದರ್ಭ ಮನಸ್ಸನ್ನು ಆಹ್ಲಾದಕರವಾಗಿಸಲು ಕುಟುಂಬದ ಸದಸ್ಯರು ಸಹಕರಿಸಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss