ದೊರೆಸ್ವಾಮಿಯವರೆ, ಸ್ವಾತಂತ್ರ್ಯ ಹೋರಾಟಗಾರರ ಘನತೆಯನ್ನು ದಯವಿಟ್ಟು ಕಳೆಯದಿರಿ…

0
291

ನರೇಂದ್ರ ಎಸ್. ಗಂಗೊಳ್ಳಿ

ದೊರೆಸ್ವಾಮಿಗಳೇ ಇಷ್ಟು ವರುಷಗಳ ಕಾಲ ನಿಮ್ಮೆಲ್ಲಾ ನಡೆನುಡಿಗಳನ್ನು ಗಮನಿಸಿದ ಮೇಲೂ ನಿಮ್ಮ ಬಗೆಗೆ ಮೊನ್ನೆ ಮೊನ್ನೆಯವರೆಗೂ  ಒಂದು ಸಣ್ಣ ಗೌರವ ಮನದ ಮೂಲೆಯಲ್ಲೆಲ್ಲೋ ಇದ್ದಿತ್ತು. ಅದಕ್ಕೆ ಕಾರಣವಾಗಿದ್ದದ್ದು ಒಂದೇ ವಿಚಾರ. ನೀವು ಸ್ವಾತಂತ್ರ್ಯ ಹೋರಾಟಗಾರ ಎಂದು ಗುರುತಿಸಿಕೊಂಡಿದ್ದೀರಿ ಎನ್ನುವುದು. ಆದರೆ ಯಾವತ್ತು ನೀವು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ವೀರ ಸಾವರ್ಕರ್ ಅವರನ್ನೇ ಹೇಡಿ ಎಂದಿರೋ ಅಲ್ಲಿಗೆ ನಿಮ್ಮ ಬಗೆಗೆ ಇದ್ದ ಕಿಂಚಿತ್ ಗೌರವ ಕೂಡ ಇಲ್ಲವಾಗಿದೆ. ನಿಮ್ಮಂತವರ ನಡವಳಿಕೆಗಳು ಮತ್ತು ಮಾತುಗಳನ್ನು ಯಾರೊಬ್ಬರೂ ಪ್ರಶ್ನಿಸದಿದ್ದರೆ ಒಂದಷ್ಟು ಜನ ನಿಮ್ಮ ಮಾತುಗಳೇ ಸತ್ಯವಿರಬೇಕು ಎಂದುಕೊಂಡು ಬಿಟ್ಟರೆ ಅದಕ್ಕಿಂತ ಅಪಾಯ ಮತ್ತೊಂದಿಲ್ಲವೆನ್ನಿಸಿ ನಿಮ್ಮನ್ನು ಪ್ರಶ್ನಿಸಲೇ ಬೇಕೆನ್ನಿಸಿ ಈ ಪತ್ರವನ್ನು ಬರೆಯುತ್ತಿದ್ದೇನೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯಾರೇ ಆಗಿರಲಿ ಅವರಿಗೆ ಭರಪೂರ ಗೌರವ ಕೊಡುವ ಸಂಸ್ಕೃತಿ ನಮ್ಮದು. ಯಾಕೆಂದರೆ ಅವರೆಲ್ಲರ ಹೋರಾಟದಿಂದಲೇ ಈ ಭಾರತ ಇಂದು ನಮ್ಮ ದೇಶ ಎಂದು ಹೆಮ್ಮೆಯಿಂದ ಹೇಳಿಕೊಂಡು ನಾವು ತಿರುಗಾಡುತ್ತಿರುವುದು ಎನ್ನುವ ಅರಿವು ನಮಗಿದೆ. ಇರಲೇಬೇಕು ಕೂಡ.  ಮಾತ್ರವಲ್ಲದೆ ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಜನಿಸಿದ್ದಾರೆ ಎನ್ನುವ ಕಾರಣಕ್ಕಾಗಿಯೂ ಕೂಡ ನಾವು ಆ ಜನರನ್ನು ಪೂಜನೀಯ ಭಾವನೆಯಿಂದ ನೋಡಿದಂತವರು. ದೊರೆಸ್ವಾಮಿಯವರೆ, ನೀವು ಸ್ವಾತಂತ್ರ್ಯ ಹೋರಾಟದ ಸಂಧರ್ಭದಲ್ಲಿ ಜೈಲು ಸೇರಿದ್ದಿರಿ ಎನ್ನುವ ಕಾರಣಕ್ಕಾಗಿಯೇ ನಿಮಗೆ ಇಷ್ಟು ದಿನವೂ ನಾಡಿನ ಜನತೆ ಗೌರವ ಕೊಡುತ್ತಾ ಬಂದಿರುವಂತಾದ್ದು.

ಆದರೆ ಇತ್ತೀಚಿನ ವರುಷಗಳಲ್ಲಿ ನಿಮ್ಮ ನಡವಳಿಕೆಗಳು ಸ್ವಾತಂತ್ರ್ಯ ಹೋರಾಟಗಾರರು ಬಿಡಿ, ಓರ್ವ ಹಿರಿಯ ವ್ಯಕ್ತಿ ಹೇಗೆ ನಡೆದುಕೊಳ್ಳಬೇಕಿತ್ತೋ ಹಾಗೆ ಕೂಡ ಇರಲಿಲ್ಲ ಎನ್ನುವುದು ವಿಷಾದನೀಯ. ಯಾವುದೋ ಪ್ರಗತಿಪರ ಚಿಂತಕರೊಬ್ಬರು ಮೊನ್ನೆ ನೀವು ಪ್ರಶ್ನಾತೀತ ವ್ಯಕ್ತಿ ಎಂದು ಹೇಳಿದ್ದು ಕೇಳಿ ನಗು ಬಂತು. ನಮ್ಮ ಜನ ದೇವರನ್ನೇ ಪ್ರಶ್ನಿಸಿದೆ ಬಿಟ್ಟಿಲ್ಲ. ಅಂತಾದ್ದರಲ್ಲಿ ನಿಮ್ಮನ್ನು ಪ್ರಶ್ನಿಸಬಾರದೆಂದರೆ ಅದರಷ್ಟು ಮೂರ್ಖತನ ಮತ್ತೊಂದಿಲ್ಲ. ಅಷ್ಟಕ್ಕೂ ಸ್ವಾತಂತ್ರ್ಯ ಹೋರಾಟಗಾರರೆಂದ ಮಾತ್ರಕ್ಕೆ ಮನಸ್ಸಿಗೆ ಬಂದಂತೆ ಬೇಕಾಬಿಟ್ಟಿ ಮಾತನಾಡಬಹುದಾ? ಇಡೀ ವಿಶ್ವವೇ ಆರಾಧ್ಯ ಭಾವನೆಯಿಂದ ನೋಡುತ್ತಿರುವ ಭಾರತದ ದೇಶದ ಏಳಿಗೆಗಾಗಿ ಹಗಲಿರುಳು ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಈ ದೇಶ ಕಂಡ ಅತ್ಯುತ್ತಮ ಪ್ರಧಾನಿಗಳಲ್ಲೊಬ್ಬರಾಗಿರುವ ನರೇಂದ್ರ ಮೋದಿಯಂತಹ ಪ್ರಧಾನಿಯನ್ನೇ ಮುಗಿಸಿಬಿಡಿ ಎನ್ನುವಂತಹ ತುಚ್ಛ ಹೇಳಿಕೆ ನೀಡಿದ್ದ  ನಿಮ್ಮ ದೇಶಾಭಿಮಾನ ಪ್ರಶ್ನಿಸಬೇಕಲ್ಲವೆ?
ನಿಮಗೆ ಗೊತ್ತಲ್ವಾ! ಸಾವರ್ಕರ್ 1857ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಎನ್ನುವ ಪುಸ್ತಕವೊಂದನ್ನು ಬರೆದಿದ್ದರು. ಒಂದಷ್ಟು ಹಸ್ತಪ್ರತಿಗಳನ್ನು ಮೋಸದಿಂದ ಲಪಟಾಯಿಸಿ ಓದಿದ್ದ ಬ್ರಿಟಿಷರು ಸಾವರ್ಕರರ ಆ ಕೃತಿಗೆ ಅದ್ಯಾವ ಪರಿ ಹೆದರಿಕೊಂಡಿದ್ದರು ಎಂದರೆ ಮುದ್ರಣಕ್ಕೆ ಹೋಗುವ ಮೊದಲೇ ಕೃತಿ ಮುದ್ರಣವಾಗಿಲ್ಲವೆಂದು ಒಪ್ಪಿಕೊಂಡೇ ಅದನ್ನು ಬಹಿಷ್ಕರಿಸಿದ್ದರು. ಹಾಗೆ ಒಂದು ಕೃತಿ ಪ್ರಕಟಗೊಳ್ಳುವ ಮೊದಲೇ ನಿಷೇಧಕ್ಕೊಳಗಾಗಿದ್ದು ಅದೇ ಮೊದಲಾಗಿತ್ತು. ಇಂಗ್ಲೀಷ್ ಪತ್ರಿಕೆಗಳೇ ಬ್ರಿಟಿಷ್ ಸರ್ಕಾರದ ಈ ನಿಲುವನ್ನು ಯದ್ವಾತದ್ವಾ ಖಂಡಿಸಿದ್ದವು. ಸ್ವತಃ ಸಾವರ್ಕರ್ ಸರ್ಕಾರದ ಈ ಅರ್ಥಹೀನ ನಿಲುವನ್ನು ಖಂಡಿಸಿ ದಿ ಲಂಡನ್ ಟೈಮ್ಸ್ ನಲ್ಲಿ ತೀವ್ರವಾದ ಲೇಖನವೊಂದನ್ನು ಬರೆದಿದ್ದರು. ಮಾತ್ರವಲ್ಲ ಆ  ಕೃತಿಯನ್ನು ಅಚ್ಚು ಹಾಕಿಸಿ ಅದನ್ನು ಯಶಸ್ವಿಯಾಗಿಯೇ ಭಾರತದ ಜನಗಳಿಗೆ ತಲುಪಿಸಿದ್ದರು.

ಅದೊಂದು ಕೃತಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಕಿಚ್ಚು ಹತ್ತಿಸುವಲ್ಲಿ ಸಫಲವಾಯಿತು. ನೇತಾಜಿ ಕಟ್ಟಿದ್ದ ಆಜಾದ್ ಹಿಂದ್ ಫೌಜ್‌ನಲ್ಲಿನ ಹಲವಾರು ಶಿಬಿರಗಳಲ್ಲಿ ಸೈನಿಕರನ್ನು ಹುರಿದುಂಬಿಸಲು ಈ ಕೃತಿ ಬಳಕೆಯಾಗುತಿತ್ತು. ಕ್ರಾಂತಿಕಾರಿ ಭಗತ್ ಸಿಂಗ್ ಮತ್ತವರ ಸಹಚರರಿಗೂ ಈ ಕೃತಿ ಬಹಳಷ್ಟು ಪ್ರೇರಣೆ ನೀಡಿತ್ತು. ಸಾವರ್ಕರ್ ಅವರ ಒಂದು ಪುಸ್ತಕಕ್ಕೆ ಬ್ರಿಟಿಷರು ಹೆದರಿದ್ದರು ಎಂದ ಮೇಲೆ ಸಾವರ್ಕರ್‌ಗೆ ಹೆದರದಿರುತ್ತಾರೆಯೇ?

ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ ಎಂದು ಘೋಷಿಸಿದ ಭಾರತದ ಮೊದಲ ರಾಜಕೀಯ ನಾಯಕ ಸಾವರ್ಕರ್. 1905ರಲ್ಲೇ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿ ಜನರಲ್ಲಿ ಸ್ವದೇಶಿ ಪ್ರಜ್ಞೆಯನ್ನು ಮೂಡಿಸಿದ ಮೊದಲ ಕ್ರಾಂತಿಕಾರಿ ಅವರು. 1904ರಲ್ಲಿ ಅಭಿನವ ಭಾರತ ಸಂಘಟನೆಯನ್ನು ಸ್ಥಾಪಿಸಿದ ಸಾವರ್ಕರ್ ಇಂಗ್ಲೆಂಡಿನಲ್ಲಿದ್ದುಕೊಂಡೇ ಬ್ರಿಟಿಷರ ವಿರುದ್ಧ ಹೋರಾಟ ಆರಂಭಿಸಿದ್ದರು. ಸಾವರ್ಕರ್ ಹೋರಾಟದ ಹಾದಿಯನ್ನು ಅರಿತವರಿಗೆ ಅವರ ಬಗೆಗೆ ವಿವರ ನೀಡುವುದು ಖಂಡಿತಾ ಬೇಕಿಲ್ಲ. ಮುಂದೆ ನಾನಾ ತೆರನಾದ ಆರೋಪಗಳನ್ನು ಹೊರಿಸಿ ಅವರಿಗೆ  ಒಟ್ಟು 50 ವರುಷಗಳ ಕರಿನೀರಿನ ಶಿಕ್ಷೆ ವಿಧಿಸಲಾಯಿತು. ಈ ನಡುವೆ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದ ಹೇಡಿ ಎನ್ನುತ್ತೀರಲ್ಲಾ ಅದೊಂದು ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿನ ತಂತ್ರವಾಗಿತ್ತಷ್ಟೇ ಎನ್ನುವುದು ನಿಮಗೆ ಯಾಕೆ ಅರ್ಥವಾಗಲಿಲ್ಲ. ಸಾವರ್ಕರ್ ಅವರಂತಹ ಅಪ್ರತಿಮ ಹೋರಾಟಗಾರರನ್ನು ಹೇಡಿ ಎಂದು ಕರೆದ ನಿಮ್ಮ ಮಾನಸಿಕತೆ ಅದ್ಯಾವ ಮಟ್ಟದ್ದು ಎನ್ನುವುದನ್ನು ನೀವೇ ತೋರಿಸಿಕೊಂಡು ಬಿಟ್ಟಿರಿ. ಒಬ್ಬ ನೈಜ ಸ್ವಾತಂತ್ರ್ಯ ಹೋರಾಟಗಾರ ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರನನ್ನು ಅದು ಹೇಗೆ ಅವಮಾನಿಸಬಲ್ಲ?

ಇಲಿಯ ಬಾಲಕ್ಕೆ ಟೈಮ್ ಬಾಂಬ್ ಕಟ್ಟಿದಾಗ ಇಲಿ ಕಛೇರಿ ಒಳಕ್ಕೆ ಹೋಗುತ್ತಿದ್ದುದು ಹೇಗೆ? ಎಷ್ಟು ಸ್ಫೋಟವಾಯ್ತು? ಎಷ್ಟು ಸುಟ್ಟು ಹೋಯ್ತು ? ಎನ್ನುವುದಕ್ಕೆಲ್ಲಾ ನೀವೇ ದಾಖಲೆಗಳನ್ನು ಕೊಡ ಬೇಕಿದೆ. ಆದರೆ ಬಾಂಬ್ ಕಟ್ಟಿದವರನ್ನು ಗಾಂಧಿವಾದಿಯೆನ್ನುವುದು ಎಷ್ಟು ಸರಿ? ಹೇಳಿ.
ಹೋಗಲಿ ದೊರೆಸ್ವಾಮಿಗಳೇ ನೀವು ಅಮೂಲ್ಯ ಳಂತಹ ವಿಕೃತ ಮನಸ್ಥಿತಿಗಳ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಕ್ಕೆ ನಮ್ಮ ತಕರಾರಿಲ್ಲ. ಆಕೆ ಪಾಕಿಸ್ತಾನಕ್ಕೆ ಜೈಕಾರ ಹಾಕಿ ತಾನೆಂತವಳು ಎನ್ನುವುದನ್ನು ತೋರಿಸಿದ ಮೇಲಾದರೂ ಒಂದು ವಿಷಾದವನ್ನು ನೀವು ವ್ಯಕ್ತಪಡಿಸಿದ್ದಿರಾ? ಅವಳು ಹಾಗೆ ಕೂಗಿದ್ದು ತಪ್ಪೆಂದು ಹೇಳಿದ್ದಿರಾ? ಇಲ್ಲ. ದೇಶದೊಳಗೆ ಪದೇ ಪದೇ ದೇಶದ್ರೋಹಿಗಳು ಅಟ್ಟಹಾಸಗೈದಾಗ ಅದನ್ನು ಖಂಡಿಸಿ ಮಾತನಾಡುವ ಎದೆಗಾರಿಕೆ ತೋರಿದ್ದೀರಾ? ಇಲ್ಲ. ದೇಶದ ಪ್ರಧಾನಿಯನ್ನು ಮುಗಿಸಿ ಎಂದು ಬಾಯಿಗೆ ತೋಚಿದಂತೆ ಮಾತನಾಡುವ ನಿಮಗೆ ಇರುವ ವಾಕ್ ಸ್ವಾತಂತ್ರ್ಯ ನಿಮ್ಮನ್ನು ಪಾಕಿಸ್ತಾನದ ಏಜೆಂಟ್ ಎಂದು ಹೇಳಿದ ಯತ್ನಾಳ್‌ ರವರಿಗೆ ಯಾಕಿರಬಾರದು? ನಿಮ್ಮ ವರ್ತನೆಗಳು ಹಾಗೆ ಇತ್ತಲ್ಲವೆ?  ಸಿಎಎ ದೇಶವನ್ನು ಒಡೆದು ಹಿಂದುತ್ವ ಪ್ರತಿಪಾದಿಸಲು ಜಾರಿಗೆ ತಂದದ್ದು ಎನ್ನುವ ನಿಮ್ಮ ಜ್ಞಾನದ ಮಟ್ಟ ಪ್ರಶ್ನಾರ್ಹ.

ಹೋಗಲಿ ಕರ್ನಾಟಕದಲ್ಲಿ ಕೇವಲ ನಿಮ್ಮ ಕಾರಣಕ್ಕಾಗಿಯೇ ಎರಡು ದಿನಗಳ ಕಲಾಪವನ್ನು ಬಲಿ ಕೊಡಲಾಗಿದೆ. ಇದನ್ನು ತಿಳಿದ ಮೇಲೂ ನೀವು ಈ ವಿಚಾರವನ್ನು ಬಿಟ್ಟುಬಿಡಿ, ರಾಜ್ಯದ ಅಭಿವೃದ್ಧಿಯ ಬಗೆಗೆ ಚರ್ಚೆ ನಡೆಸಿ ಎಂದು ಹೇಳುವಂತಹ ಪ್ರಯತ್ನವನ್ನೇಕೆ ಮಾಡುವುದಿಲ್ಲ? ಹಿರಿಯರೆನ್ನಿಸಿಕೊಂಡವರು ಮಾರ್ಗ ದರ್ಶನ ನೀಡುವಂತಿರಬೇಕು ಅಲ್ಲವೆ? ಆದರೆ ನೀವು ಮಾಡುತ್ತಿರುವುದೇನು? ಯುವ ಜನಾಂಗಕ್ಕೆ ತಿಳಿ ಹೇಳಬೇಕಾದ ನಿಮ್ಮಂತವರೇ ಈ ಪರಿ ವರ್ತಿಸುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಎನ್ನುವ ಹೆಸರಿನಲ್ಲಿ ಏನು ಬೇಕಾದರೂ ಮಾಡಿ ಆಡಿ ಗಿಟ್ಟಿಸಿಕೊಳ್ಳಬಹುದು ಎನ್ನುವ ಮಾನಸಿಕತೆಯಿಂದ ದಯವಿಟ್ಟು ಹೊರಬನ್ನಿ. ನಿಮ್ಮ ಹಿಂದಿರುವ ಪಟಾಲಂ ಎಂತಾದ್ದು ಮತ್ತು ನಿಮ್ಮನ್ನು ಬೆಂಬಲಿಸುತ್ತಿರುವವರ ಜಾಯಮಾನ ಯಾವ ಪರಿಯದ್ದು ಎಂದು ಸಾಧ್ಯವಾದರೆ ಮತ್ತೊಮ್ಮೆ ಯೋಚಿಸಿ. ಸುಮ್ಮನೆ ನಿಮ್ಮ ಇಳಿ ವಯಸ್ಸಿನಲ್ಲಿ ದಯವಿಟ್ಟು ನಿಮ್ಮ ಗೌರವಕ್ಕೆ ಮತ್ತಷ್ಟು ಮಗದಷ್ಟು ಚ್ಯುತಿ ತಂದುಕೊಳ್ಳದಿರಿ.

LEAVE A REPLY

Please enter your comment!
Please enter your name here