Wednesday, June 29, 2022

Latest Posts

ದೊರೆಸ್ವಾಮಿಯವರ ಸುತ್ತ ಅನುಮಾನಗಳ ಹುತ್ತ!

ಭಾರತವು 1947ರ ಆಗಸ್ಟ್ 15 ರಂದು ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾಯಿತು. ಆ ಸ್ವಾತಂತ್ರ್ಯದ ಹಿಂದೆ ಕೋಟ್ಯಂತರ ಭಾರತೀಯರ ಹೋರಾಟವಿತ್ತು, ಬಲಿದಾನವಿತ್ತು. ಕೊನೆಗೂ ಭಾರತವು ಸ್ವಾತಂತ್ರ್ಯ ಪಡೆದಾಗ, ಬದುಕುಳಿದಿದ್ದ ಹೋರಾಟಗಾರರಿಗೆ ‘ಸ್ವಾತಂತ್ರ್ಯ ಹೋರಾಟಗಾರ’ ಎನ್ನುವ ಅಧಿಕೃತ ಗುರುತುಪತ್ರಗಳನ್ನು ನೀಡಲಾಯಿತು. ಆ ಗುರುತುಪತ್ರ ಹೊಂದಿರುವವರಿಗೆ ಮತ್ತು ಅವರ ಕುಟುಂಬವರ್ಗದವರಿಗೆ ಮೀಸಲಾತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಯಿತು ಮತ್ತು ಇಂದಿಗೂ ಒದಗಿಸಲಾಗುತ್ತಿದೆ.

ನಾವು ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಕೂಡಾ ಇಂದಿಗೂ ‘ಸ್ವಾತಂತ್ರ್ಯ ಹೋರಾಟಗಾರರಿಗೆ’ ಎಂದೇ ಒಂದು ಆಸನವನ್ನು ಮೀಸಲಿಟ್ಟಿರುವುದನ್ನು ಕಾಣಬಹುದು. ಈ ದಿನ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಬಸ್ಸು ಹತ್ತುತ್ತಾರೆಂದರೆ ಅವರ ವಯಸ್ಸು ಕನಿಷ್ಠ 90 ವರ್ಷಗಳಾದರೂ ಆಗಿರುತ್ತದೆ. 90 ವರ್ಷ ವಯಸ್ಸಿನ ವೃದ್ಧರೊಬ್ಬರು ಸಾಮಾನ್ಯ ಬಸ್ಸುಗಳಲ್ಲಿ ದೂರಪ್ರಯಾಣ ಮಾಡುವುದು ಕಷ್ಟವೇ ಸರಿ. ಒಂದೊಮ್ಮೆ ಪ್ರಯಾಣಿಸಬಯಸಿದರೂ ಅವರ ವೃದ್ಧಾಪ್ಯವನ್ನು ಪರಿಗಣಿಸಿಯೇ ಯಾರಾದರೊಬ್ಬರು ಅವರಿಗೆ ತಮ್ಮ ಆಸನವನ್ನು ಬಿಟ್ಟುಕೊಟ್ಟೇ ಕೊಡುತ್ತಾರೆ. ಆದರೂ ಅವರಿಗೆ ಆಸನವನ್ನು ಮೀಸಲಾಗಿರಿಸಲಾಗಿದೆಯೆಂದರೆ ಇಂದಿಗೂ ಲೆಕ್ಕವಿಲ್ಲದಷ್ಟು ಜನ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ನಡುವಿನಲ್ಲೇ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇದ್ದಾರೆ ಎಂದೇ ಅರ್ಥ.

ಆದರೆ ನಮ್ಮ ರಾಜ್ಯದಲ್ಲಂತೂ ಸ್ವಾತಂತ್ರ್ಯ ಹೋರಾಟಗಾರ ಎಂದ ಕೂಡಲೇ ಥಟ್ಟನೆ ಎಲ್ಲರ ನೆನಪಿಗೆ ಬರುವುದು ‘ಹಿರಿಯ ಸ್ವಾತಂತ್ರ್ಯ ಹೋರಾಟಗಾರ’ ಹೆಚ್. ಎಸ್ ದೊರೆಸ್ವಾಮಿ ಅವರ ಹೆಸರು ಮಾತ್ರ! ಬಹುಶಃ ಅವರು ಇಂದಿಗೂ ತಮ್ಮ ಪಾಡಿಗೆ ತಾವಿರದೇ ಪಕ್ಷ ರಾಜಕಾರಣ ಸೇರಿದಂತೆ ಎಲ್ಲದರಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದೇ ಅದಕ್ಕೆ ಕಾರಣವಿರಬಹುದು. ಅದೇನೇ ಇರಲಿ, ಅವರ ವರ್ತನೆಗಳನ್ನು ನೋಡಿದಾಗ ಅವರೊಬ್ಬ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಹೌದೋ ಅಥವಾ ಅಲ್ಲವೋ ಎನ್ನುವ ಬಗ್ಗೆ ಸುಮಾರು ಆರೂವರೆ ಕೋಟಿ ಕನ್ನಡಿಗರ ಮನಸ್ಸಿನಲ್ಲಿ ಅನುಮಾನ ಮೂಡುತ್ತಿರುವುದಂತೂ ಸುಳ್ಳಲ್ಲ.

ಈ ಡಿಜಿಟಲ್ ಕಾಲದಲ್ಲೇ ಎಷ್ಟೊಂದು ಜನ ಅರ್ಹತೆಯಿಲ್ಲದವರೂ ಬಿಪಿಎಲ್ ಕಾರ್ಡ್ ಅಕ್ರಮವಾಗಿ ಪಡೆಯುತ್ತಿರುವುದನ್ನು ನೋಡಿದಾಗ, ಇನ್ನು ಆ ಕಾಲದಲ್ಲಿ ಒಂದಷ್ಟು ಜನರಾದರೂ ಅಕ್ರಮವಾಗಿ ‘ಸ್ವಾತಂತ್ರ್ಯಹೋರಾಟಗಾರ’ ಕಾರ್ಡ್ ಪಡೆದಿದ್ದರೂ ಅಚ್ಚರಿಯೇನಿಲ್ಲ. ಕೇವಲ ಈ ಊಹೆಯ ಮೇಲಷ್ಟೇ ಅವರ ಸ್ವಾತಂತ್ರ್ಯ ಹೋರಾಟವನ್ನು ಅನುಮಾನಿಸಲು ಸಾಧ್ಯವಿಲ್ಲ. ಆದರೆ ಅವರ ಇತ್ತೀಚಿನ ವರ್ತನೆಗಳನ್ನು ನೋಡಿದಾಗ ಖಂಡಿತವಾಗಿಯೂ ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ ಎನ್ನುವ ಸಂಶಯವಂತೂ ನಮ್ಮ ಮನಸ್ಸಿನಲ್ಲಿ ಮೂಡದೇ ಇರಲು ಸಾಧ್ಯವೇ ಇಲ್ಲ. ಅವರು ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ ಎನ್ನುವ ಅನುಮಾನಗಳಿಗೆ ಎಡೆಮಾಡುವ ಒಂದಷ್ಟು ಉದಾಹರಣೆಗಳು ಈ ಕೆಳಗೆ ನೀವೂ ಕಾಣಬಹುದು.

ಕಳೆದ ಚುನಾವಣೆಯ ಸಂದರ್ಭದಲ್ಲಿ ಶ್ರೀಯುತ ದೊರೆಸ್ವಾಮಿಯವರು ಮಾತನಾಡುತ್ತಾ, ನರೇಂದ್ರ ಮೋದಿಯವರನ್ನು ಮುಗಿಸಿಬಿಡಿ ಎಂದು ಕರೆ ಕೊಟ್ಟ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ! ಒಮ್ಮೆ ಯೋಚಿಸಿ ನೋಡಿ; ಈ ದೇಶದಲ್ಲಿ ನಮ್ಮದೇ ಜನರ ಆಡಳಿತ ಇರಬೇಕೆಂದು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನೂ ಬದಿಗಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ್ದ ಸ್ವಾತಂತ್ರ್ಯ ಹೋರಾಟಗಾರರೇ ಅವರಾಗಿದ್ದಿದ್ದರೆ, ಪ್ರಜಾಪ್ರಭುತ್ವ ಮಾರ್ಗದಲ್ಲಿ ನಮ್ಮದೇ ದೇಶದ ಜನರೆಲ್ಲರೂ ಸೇರಿ ಆಯ್ಕೆ ಮಾಡಿದ ಪ್ರಧಾನಿಯೊಬ್ಬರನ್ನು ‘ಮುಗಿಸಿಬಿಡಿ’ ಎಂದು ಹೇಳುವುದು ಸಾಧ್ಯವಿತ್ತೇ? ಹಾಂ, ಅವರು ಮೋದಿಯನ್ನು ಮುಗಿಸಿಬಿಡಿ ಎಂದು ಹೇಳಿದ್ದಕ್ಕೆ ಬೇರೆಯದ್ದೇ ಅರ್ಥವಿದೆ ಎನ್ನುವ ಸಮಜಾಯಿಷಿ ನೀಡಲು ಬರುವುದಾದರೆ ಅದಕ್ಕೂ ಮೊದಲು ‘ದೊರೆಸ್ವಾಮಿಯವರನ್ನು ಮುಗಿಸಿಬಿಡಿ’ ಎನ್ನುವ ಹೇಳಿಕೆಯೇನಾದರೂ ಯಾರಿಂದಲಾದರೂ ಬಂದಿದ್ದರೆ, ಆಗಲೂ ಅದೇ ರೀತಿಯ ಸಮಜಾಯಿಷಿ ಕೊಟ್ಟರೆ ನೀವು ಒಪ್ಪುತ್ತೀರಾ ಎನ್ನುವುದನ್ನು ಯೋಚಿಸಿದ ನಂತರ ಅವರ ಆ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಮುಂದೆ ಬನ್ನಿ.

ಇದಕ್ಕಿಂತಲೂ ಮುಖ್ಯವಾಗಿ ದೊರೆಸ್ವಾಮಿಯವರು, ಪ್ರಜಾಪ್ರಭುತ್ವವನ್ನು ಶತಾಯಗತಾಯ ಮುಗಿಸಿಹಾಕಲೇಬೇಕೆನ್ನುವ ನಿಟ್ಟಿನಲ್ಲಿ ಕಾನೂನು ಮತ್ತು ಸಂವಿಧಾನವೆಲ್ಲವನ್ನೂ ಮೀರಿ, ಬಂದೂಕು ಹಿಡಿದ (ಮಾಜಿ) ಮಾವೋವಾದಿ ಭಯೋತ್ಪಾದಕರ ಮತ್ತು ಅವರ ನಿಕಟವರ್ತಿಗಳ ಜೊತೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ! ದೇಶದ್ರೋಹದ ಘೋಷಣೆ ಕೂಗುವ ಮತ್ತು ಕೂಗಿದ (ಭಾವೀ) ದೇಶದ್ರೋಹಿಗಳ ಜೊತೆ ಸಲಿಗೆಯಿಂದ ನಿಂತು ಫೋಟೋ ತೆಗೆಸಿಕೊಂಡ ದೊರೆಸ್ವಾಮಿಯವರನ್ನು ನೀವು ಎಲ್ಲ ಕಡೆಯೂ ಕಾಣಬಹುದು.

ಆದರೆ ಈ ದೇಶದ ಸೈನಿಕರ ಶೌರ್ಯವನ್ನು ಹೊಗಳುವ, ಅವರಿಗೆ ಗೌರವ ಸಮರ್ಪಿಸುವ, ವಿಜಯೋತ್ಸವ ಆಚರಿಸುವ ಕಾರ್ಯಕ್ರಮಗಳಲ್ಲಿ ದೊರೆಸ್ವಾಮಿಯವರನ್ನು ಕಂಡವರು ತುಂಬಾ ಅಪರೂಪ! ಈಗ ಹೇಳಿ, ನಮ್ಮ ಕಣ್ಣೆದುರಿಗೇ ಯಾವ ಗುಂಪು ಈ ದೇಶವನ್ನು ತುಂಡು ತುಂಡು ಮಾಡುವ ಘೋಷಣೆ ಹಾಕುತ್ತದೆಯೋ, ಯಾವ ಗುಂಪು ವಿರೋಧೀ ದೇಶದ ಪರವಾಗಿ ಘೋಷಣೆ ಕೂಗುತ್ತದೆಯೋ, ಯಾವ ಗುಂಪು ರಕ್ತದೋಕುಳಿ ಹರಿಸಿ ಈ ದೇಶದ ಪ್ರಜಾಪ್ರಭುತ್ವವನ್ನು ನಾಶ ಮಾಡಬೇಕೆಂದು ಬಯಸುತ್ತಿದೆಯೋ ಅಂತಹಾ ಗುಂಪುಗಳೊಂದಿಗೆ ಸಂಪರ್ಕ ಹೊಂದಿರವವರ ಜೊತೆಗೇ ಸದಾ ಇದ್ದುಕೊಂಡು, ಅವರ ಹಿರಿಯಜ್ಜನಂತೆ ವರ್ತಿಸುವ ದೊರೆಸ್ವಾಮಿಯವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ಈ ದೇಶದ ಒಳಿತಿಗಾಗಿ ತಮ್ಮ ಯೌವನದ ‘ಅಮೂಲ್ಯ’ ದಿನಗಳನ್ನು ತ್ಯಾಗ ಮಾಡಿದ್ದರು ಎಂದರೆ ಯಾರಿಗಾದರೂ ಅನುಮಾನ ಬರದೇ ಇರುತ್ತದೆಯೇ?

ವಿಚಾರ ಸಂಕಿರಣವೊಂದರಲ್ಲಿ ಶ್ರೀಯುತ ದೊರೆಸ್ವಾಮಿಯವರು, ಇಲಿಗಳ ಬಾಲಕ್ಕೆ ಬಾಂಬ್ ಕಟ್ಟಿ ಸ್ಫೋಟಿಸುತ್ತಿದ್ದುದಾಗಿ ಹೇಳಿಕೆಯನ್ನು ನೀಡಿದ್ದರು.ಇದೀಗ ಅವರ ವಿವರಗಳನ್ನು ನೀಡುವ ವಿಕಿಪೀಡಿಯಾದಲ್ಲೂ, ಅವರು ಅಂದಿನ ಕಾಲದಲ್ಲಿ ಬಾಂಬ್ ತಯಾರಿಸಿ ಸ್ಫೋಟಿಸುತ್ತಿದ್ದ ತಜ್ಞರು ಎನ್ನುವಂತೆ ಮತ್ತು ಅದೇ ಕಾರಣಕ್ಕೆ ಅವರ ಬಂಧನವಾಯಿತು ಎಂದು ತಿದ್ದಲಾಗಿದೆ! ಗಾಂಧಿವಾದಿಯೆಂದು ಮತ್ತು ಗಾಂಧೀಜಿಯವರ ನಿಕಟವರ್ತಿಯೆಂದು ಬಿಂಬಿಸಿಕೊಳ್ಳುವ ಅವರ ಆ ‘ಇಲಿಯ ಬಾಲ ಮತ್ತು ಬಾಂಬ್’ ಹೇಳಿಕೆಯು ಕೇವಲ ಗಾಂಧೀಜಿಯವರಿಗೆ ಮಾತ್ರ ಮಾಡಿದ ಅಪಚಾರವಲ್ಲ, ಇಡೀ ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿಗೇ ಬಗೆದ ಅಪಚಾರ. ಒಂದು ವೇಳೆ ಅವರು ಬಾಂಬ್ ತಯಾರಿಸಿ ಸ್ಫೋಟಿಸುತ್ತಿದ್ದುದೇ ನಿಜವಾಗಿದ್ದರೆ ಅದು ಗಾಂಧೀವಾದ ಹೇಗಾಗುತ್ತದೆ? ದೊರೆಸ್ವಾಮಿಯವರು ಬಾಂಬ್ ತಯಾರಿಸಿ ಸ್ಫೋಟಿಸಲು ಮಹಾತ್ಮಾ ಗಾಂಧಿಯವರು ಒಪ್ಪಿಗೆ ಕೊಟ್ಟಿದ್ದರೆ ಅಥವಾ ಮಹಾತ್ಮಾ ಗಾಂಧಿಯವರ ನಿಕಟವರ್ತಿಯೆನ್ನಿಸಿಕೊಳ್ಳುವ ಸಲುವಾಗಿ ಗಾಂಧೀಜಿಯವರಿಂದಲೇ ತಾನೊಬ್ಬ ಬಾಂಬ್ ತಜ್ಞ ಎನ್ನುವುದನ್ನು ಮುಚ್ಚಿಟ್ಟಿದ್ದರೆ? ಒಂದೋ ಅವರು ಬಾಂಬ್ ತಯಾರಿಸುತ್ತಿದ್ದುದು ಸುಳ್ಳು ಅಥವಾ ಅವರು ಗಾಂಧೀಜಿಯವರ ಅಹಿಂಸಾ ತತ್ವವನ್ನು ಪಾಲಿಸುತ್ತಾ ಅವರ ಅನುಯಾಯಿಯಾಗಿದ್ದಿದ್ದು ಸುಳ್ಳು. ಎರಡೂ ಸತ್ಯವಾಗಿರಲು ಸಾಧ್ಯವೇ ಇಲ್ಲ. ಹೀಗಿರುವಾಗ ತಾನೊಬ್ಬ ದೊಡ್ಡ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿಕೊಳ್ಳುವ ಸಲುವಾಗಿಯೇ ಅವರು ಒಂದು ಸುಳ್ಳು ಹೇಳಿರುವುದಂತೂ ಸತ್ಯವಲ್ಲವೇ? ಹೀಗೆ ಚಿಕ್ಕ ಮಕ್ಕಳಿಗೂ ಗೊತ್ತಾಗಿಬಿಡುವಂತಹಾ ಸುಳ್ಳು ಹೇಳಿದವರು, ಇನ್ನು ಏಳೆಂಟು ದಶಕಗಳ ಹಿಂದೆ ತಾನು ಮಾಡಿದೆನೆಂದು ಹೇಳಿದ್ದೆಲ್ಲವೂ ಅನುಮಾನಾಸ್ಪದವೇ ಅಲ್ಲವೇ?

ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ಸಂಗತಿಯೆಂದರೆ, ಅವರೇ ಹೇಳಿಕೊಂಡಂತೆ ಏಳೆಂಟು ದಶಕಗಳ ಹಿಂದೆಯೇ ಅವರೊಬ್ಬ ಬಾಂಬ್ ತಜ್ಞರೇ ಆಗಿದ್ದರೆ, ಸದಾ ದೇಶದ್ರೋಹದ ಪ್ರಕರಣದ ಆರೋಪಿಗಳ ಜೊತೆಯಿರುವ ಮತ್ತು ಮಾವೋವಾದಿಗಳ ಸಂಪರ್ಕದಲ್ಲಿರುವವರೊಂದಿಗೆ ಸಂಪರ್ಕ ಹೊಂದಿರುವ ಅವರು ತಮ್ಮ ಬಾಂಬ್ ತಯಾರಿಕಾ ಅನುಭವವನ್ನು ದೇಶದ್ರೋಹಿ ಪ್ರಕರಣದ ಆರೋಪಿಗಳು ಮತ್ತು ಮಾವೋವಾದಿಗಳೊಂದಿಗೂ ಹಂಚಿಕೊಂಡಿರಬಹುದಾದ ಅನುಮಾನವೂ ಜನರಿಗಿದೆ.

ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ವೀರ ಸಾವರ್ಕರ್ ಅವರನ್ನೇ ದೊರೆಸ್ವಾಮಿಯವರು ‘ಸಾವರ್ಕರ್ ಒಬ್ಬ ಹೇಡಿ’ ಎಂದು ಹೇಳುತ್ತಾರೆ ಎಂದರೆ, ನಿಜವಾಗಿಯೂ ಎಂತಹವರಿಗೂ ದೊರೆಸ್ವಾಮಿಯವರು ಒಬ್ಬ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಹೌದೇ ಎನ್ನುವ ಅನುಮಾನ ಬಂದೇ ಬರುತ್ತದೆ. ಅದೇನೇ ಭಿನ್ನಾಭಿಪ್ರಾಯವಿದ್ದರೂ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇನ್ನೊಬ್ಬ ವೀರನನ್ನು ಹೇಡಿ ಎನ್ನಲು ಸಾಧ್ಯವೇ ಇಲ್ಲ. ಅದರಲ್ಲೂ ತನ್ನೆದುರು ಬದುಕಿಲ್ಲದ ಹೋರಾಟಗಾರನನ್ನು ಹೇಡಿ ಎನ್ನುತ್ತಾರೆಂದರೆ ಖಂಡಿತವಾಗಿಯೂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೊರೆಸ್ವಾಮಿಯವರು ಸಕ್ರಿಯವಾಗಿದ್ದಿರಲು ಸಾಧ್ಯವೇ ಇಲ್ಲ.

ಈ ಮೇಲಿನ ಎಲ್ಲಾ ಉದಾಹರಣೆಗಳೂ ದೊರೆಸ್ವಾಮಿಯವರು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಆಗಿರಲೇ ಇಲ್ಲ ಎನ್ನುವ ಅನುಮಾನವನ್ನೇ ಹುಟ್ಟಿಸುತ್ತವೆ. ಕೇವಲ ಸ್ವಾತಂತ್ರ್ಯಪೂರ್ವದಲ್ಲಿ ಜನಿಸಿದ್ದ ಒಂದೇ ಕಾರಣದಿಂದ ಅವರೂ ಒಬ್ಬ ಸ್ವಾತಂತ್ರ್ಯ ಹೋರಾಟಗಾರರೆನ್ನುವ ಪ್ರಮಾಣ ಪತ್ರ ಪಡೆದಿರಬಹುದೆನ್ನುವ ಅನುಮಾನವನ್ನೂ ಮೂಡಿಸುತ್ತವೆ. ಈ ಅನುಮಾನಗಳನ್ನು ಜನರ ಮುಂದಿಡುವ ಸ್ವಾತಂತ್ರ್ಯವನ್ನು ಗಾಂಧೀಜಿ, ನೇತಾಜಿ, ಸಾವರ್ಕರ್ ಅವರು ನಮಗೆ ಕೊಡಿಸಿದ್ದಾರೆ.
ಆದ್ದರಿಂದ ಶತಾಯುಷಿ ದೊರೆಸ್ವಾಮಿಯವರೇ… ಕಾಗಜ್ ನಹೀ ದಿಖಾಯೇಂಗೆ ಎನ್ನದೇ, ನಿಮ್ಮದೇ ಗುಂಪುಗಳಿಂದ ನಿಮ್ಮ ಪರ ತುತ್ತೂರಿ ಊದಿಸದೇ, ನೀವೇ ಬರೆಸಿಕೊಂಡ ನಿಮ್ಮದೇ ಆತ್ಮಕಥೆ ಓದುವಂತೆ ತಿಳಿಸದೇ ನೇರವಾಗಿ ನಮ್ಮ ಅನುಮಾನಗಳನ್ನು ಪರಿಹರಿಸಿ. ನಿಮ್ಮ ಹೋರಾಟ ಅಸಲಿಯೋ ಅಥವಾ ನಕಲಿಯೋ?

-ಪ್ರವೀಣ್‌ಕುಮಾರ್ ಮಾವಿನಕಾಡು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss