Wednesday, July 6, 2022

Latest Posts

ದೌರ್ಜನ್ಯಕ್ಕೊಳಗಾದವರಿಗೆ ಕಾನೂನಿನ ನೆರವು ಒದಗಿಸಿ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ

ಮಣಿಪಾಲ: ಸಮಾಜದಲ್ಲಿ ನೊಂದ ನಿರ್ಗತಿಕ, ದೌರ್ಜನ್ಯಕ್ಕೊಳಗಾಗಿ ಸಂಕಷ್ಟದಲ್ಲಿರುವ ಮಹಿಳೆಯರು ಹಾಗೂ ಮಕ್ಕಳಿಗೆ ಸಾಂತ್ವನ ಹೇಳುವುದರ ಜೊತೆಗೆ ಆಶ್ರಯ ನೀಡಿ ಕಾನೂನಿನ ನೆರವನ್ನು ಒದಗಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಂತ್ವನ ಯೋಜನೆ, ಕೌಟುಂಬಿಕ ಹಿಂಸೆ, ಮಹಿಳೆಯರ ರಕ್ಷಣೆ, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆ, ಬಾಲ್ಯವಿವಾಹ ನಿಷೇಧ, ಮಾದಕ ವಸ್ತುಗಳ ಸೇವನೆ ನಿಷೇಧ ಹಾಗೂ ಸಖಿ ವನ್ ಸ್ಟಾಪ್ ಸೆಂಟರ್‌ನ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ದುರ್ಬಲರಾದ ಮಹಿಳೆ ಮತ್ತು ಮಕ್ಕಳ ಮೇಲೆ ಶೋಷಣೆ ಹಾಗೂ ದೌರ್ಜನ್ಯವನ್ನು ತಡೆಯಲು ಸರಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಇವುಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದರೊಂದಿಗೆ ನೊಂದವರಿಗೆ ಸಾಂತ್ವನ ಹೇಳುವುದರ ಜೊತೆಗೆ ಆಶ್ರಯ ಒದಗಿಸಿ, ಧೈರ್ಯ ತುಂಬಿ ಅಗತ್ಯ ನೆರವುಗಳನ್ನು ಕಲ್ಪಿಸಬೇಕು ಎಂದರು.
ಸಾಂತ್ವನ ಕೇಂದ್ರಗಳಿಗೆ ಕಳೆದ ಡಿಸೆಂಬರ್‌ನಿಂದ ಈವರೆಗೆ ಜಿಲ್ಲೆಯಲ್ಲಿ 187 ಪ್ರಕರಣಗಳು ದಾಖಲಾಗಿದ್ದು, ಹಳೆಯ ಬಾಕಿ ಸೇರಿ 401 ಪ್ರಕರಣಗಳಿವೆ. ಅವುಗಳಲ್ಲಿ 180 ಪ್ರಕರಣಗಳು ಇತ್ಯಾರ್ಥವಾಗಿವೆ. ಉಳಿದಂತೆ 165 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, 56 ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಬಾಕಿ ಉಳಿದ ಪ್ರಕರಣಗಳನ್ನು ಸಮಾಲೋಚನೆ ನಡೆಸುವುದರೊಂದಿಗೆ ಶೀಘ್ರವಾಗಿ ಇತ್ಯಾರ್ಥಗೊಳಿಸಬೇಕೆಂದು ಸೂಚನೆ ನೀಡಿದರು.
ಪೋಕ್ಸೊ ಕಾಯ್ದೆಯಡಿ ಪ್ರಸ್ತುತ ಸಾಲಿನಲ್ಲಿ 33ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ 22 ಪ್ರಕರಣಗಳನ್ನು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿದೆ. ಇನ್ನೂ 11 ಪ್ರಕರಣಗಳು ತನಿಖಾ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ ಹೇಳಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ಸಿಇಒ ಡಾ. ವೈ. ನವೀನ್ ಭಟ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಶೇಷಪ್ಪ ಆರ್., ಡಿಎಚ್‌ಒ ಸುಧೀರ್‌ಚಂದ್ರ ಸೂಡ ಮೊದಲಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss