Saturday, June 25, 2022

Latest Posts

ದ್ವಿತೀಯ ಪಿಯುಸಿ:ಕೋಲಾರ ಜಿಲ್ಲೆಗೆ 16ನೇ ಸ್ಥಾನ: ಶೇ.67.42 ಫಲಿತಾಂಶ

ಕೋಲಾರ:   ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹೊಸದಾಗಿ ಕುಳಿತಿದ್ದ ೧೩೩೭೭ ಮಂದಿ ವಿದ್ಯಾರ್ಥಿಗಳ ಪೈಕಿ ೯೦೧೯ ಮಂದಿ ತೇರ್ಗಡೆಯಾಗುವ ಮೂಲಕ  ಜಿಲ್ಲೆ ಶೇ.೬೭.೪೨ ಫಲಿತಾಂಶದೊಂದಿಗೆ ೧೬ನೇ ಸ್ಥಾನಕ್ಕೇರಿದೆ ಎಂದು  ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎ.ಎನ್.ಗೀತಾ ತಿಳಿಸಿದ್ದಾರೆ.
ಕಳೆದ ಬಾರಿ ೧೮ನೇ ಸ್ಥಾನದಲ್ಲಿದ್ದ ಜಿಲ್ಲೆಯಲ್ಲಿ ಈ ಬಾರಿ ಶೇ.೨ ರಷ್ಟು ಫಲಿತಾಂಶ ಏರಿಕೆಯಾಗಿದ್ದು, ೧೬ನೇ ಸ್ಥಾನ ಸಿಕ್ಕಿದೆ.
ಖಾಸಗಿ,ಪುನರಾವರ್ತಿತ ಹಾಗೂ ಹೊಸ ವಿದ್ಯಾರ್ಥಿಗಳು ಒಟ್ಟು ೮೦೬೧ ಬಾಲಕರು, ೮೨೯೮ ಬಾಲಕಿಯರು ಸೇರಿದಂತೆ ೧೬೩೫೯ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು,ಅವರಲ್ಲಿ ೯೮೪೭ ಮಂದಿ ತೇರ್ಗಡೆಯಾಗಿದ್ದಾರೆ.
ಈ ಬಾರಿ ಪರೀಕ್ಷೆಗೆ ನೋಂದಾಯಿಸಿದ್ದ ೮೦೬೧ ಬಾಲಕರ ಪೈಕಿ ೪೩೮೭ ಮಂದಿ ತೇರ್ಗಡೆಯಾಗಿ ಶೇ.೫೪.೪೨ ಫಳಿತಾಂಶ ಬಂದಿದೆ ಆದರೆ ಪರೀಕ್ಷೆಗೆ ನೋಂದಾಯಿಸಿದ್ದ ೮೨೯೮ ಬಾಲಕಿಯರ ಪೈಕಿ ೫೪೬೦ ಮಂದಿ ಬಾಲಕಿಯರು ತೇರ್ಗಡೆಯಾಗಿ ಶೇ.೬೫.೧೮ ಫಲಿತಾಂಶ ಬಂದಿದ್ದು ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ವಿದ್ಯಾಜ್ಯೋತಿ ಪದವಿ ಪೂರ್ವ ಕಾಲೇಜಿನ ರೇವಂತ್ ೫೮೯ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗಳಾಗಿದ್ದು, ನಗರದ ಸಹ್ಯಾದ್ರಿ ಕಾಲೇಜಿನ ಕೆ.ನಂದನ್ ೫೮೭ ಹಾಗೂ ಎಂ.ಶಶಾಂಕ್ ೫೮೬ ಅಂಕಗಳೊಂದಿಗೆ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ನಗರದ ಎಸ್‌ಡಿಸಿ ಕಾಲೇಜಿನ ತುಷಾರ ಎನ್.ಶೆಟ್ಟಿ ೫೯೩ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಮಹಿಳಾ ಸಮಾಜ ಕಾಲೇಜಿನ ಉಜ್ರಾಬೇಗಂ ೫೮೮ ಅಂಕಗಳೊಂದಿಗೆ ದ್ವಿತೀಯ ಹಾಗೂ ಸಹ್ಯಾದ್ರಿ ಕಾಲೇಜಿನ ಎನ್,ದೀಪ್ತಿ ೫೮೬ ಅಂಕ ಗಳಿಸಿ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ನಗರದ ಬಾಲಕಿಯರ ಸರ್ಕಾರಿ  ಪಿಯು ಕಾಲೇಜಿನ ಎ.ವಿ.ಅಂಜಲಿ ೫೬೮ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿದ್ದು, ಮಾಲೂರು ಪಿಯು ಕಾಲೇಜಿನ ಸಿ.ಮಲ್ಲಿಕಾರ್ಜುನ ೫೪೯ ಅಂಕಗಳೊಂದಿಗೆ ದ್ವಿತೀಯ ಹಾಗೂ ಆವಣಿ ಪಿಯು ಕಾಲೇಜಿನ ಶಿವಶಂಕರ್ ವರಪ್ರಸಾದ್ ೫೪೫ ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನದಲ್ಲಿ ಶೇ.೮೨ ಫಲಿತಾಂಶ ಲಭ್ಯ
ಜಿಲ್ಲೆಯಲ್ಲಿ ಹೊಸದಾಗಿ ವಿಜ್ಞಾನ ವಿಭಾಗದಿಂದ ೪೩೯೦ ವಿದ್ಯಾರ್ಥಿಗಳು ನೋಂದಯಿಸಿದ್ದು, ವರಲ್ಲಿ ೩೬೦೧ ಮಂದಿ ತೇರ್ಗಡೆಯಾಗುವ ಮೂಲಕ ಶೇ. ೮೨.೬೩ ಫಲಿತಾಂಶ ಬಂದಿದೆ.
ಕಲಾ ವಿಭಾಗದಲ್ಲಿ ೧೮೬೧ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ೬೮೧ ಮಂದಿ ತೇರ್ಗಡೆಯಾಗುವ ಮೂಲಕ ಶೇ.೩೬.೫೯ ಫಲಿತಾಂಶ ಬಂದಿದ್ದರೆ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ನೋಂದಾಯಿಸಿದ್ದ ೭೧೨೬ ಮಂದಿ ಹೊಸ ವಿದ್ಯಾರ್ಥಿಗಳ ಪೈಕಿ ೪೭೩೭ ಮಂದಿ ತೇರ್ಗಡೆಯಾಗಿ ಶೇ.೬೬.೪೭ ಫಲಿತಾಂಶ ಲಭ್ಯವಾಗಿದೆ ಎಂದು ಪಿಯು ಉಪನಿರ್ದೇಶಕಿ ಗೀತಾ ಅವರು ತಿಳಿಸಿದ್ದಾರೆ.
ಚಿನ್ಮಯ ಪಿಯುಗೆ ಶೇ.೧೦೦ ಫಲಿತಾಂಶ
ಖಾಸಗಿ ಅನುದಾನ ರಹಿತ ಕಾಲೇಜುಗಳ ಪಟ್ಟಿಯಲ್ಲಿ ಚಿನ್ಮಯ ಪದವಿ ಪೂರ್ವ ಕಾಲೇಜು ಶೇ.೧೦೦ ಫಲಿತಾಂಶದೊಂದಿಗೆ ಮೊದಲ ಸ್ಥಾನ ಗಳಿಸಿದ್ದು, ನಂತರ ಶೇ.೯೯ ಫಲಿತಾಂಶದೊಂದಿಗೆ ಸಹ್ಯಾದ್ರಿ ಪಿಯು ಕಾಲೇಜು ಹಾಗೂ ಮೂರನೇ  ಸ್ಥಾನ ಶೇ.೯೮ ಫಲಿತಾಂಶದೊಂದಿಗೆ ಎಸ್‌ಡಿಸಿ ಪಿಯು ಕಾಲೇಜು ಪಡೆದುಕೊಂಡಿದೆ.
ಅನುದಾನಿತ ಕಾಲೇಜುಗಳ ಪಟ್ಟಿಯಲ್ಲಿ ಬೈರಕೂರು ನೆಹರು ಕೆನಡಿ ಪಿಯು ಕಾಲೇಜು ಶೇ.೮೩ ಫಲಿತಾಂಶದೊಂದಿಗೆ ಮೊದಲ ಸ್ಥಾನ, ಕೋಲಾರದ ಆಲ್‌ಅಮೀನ್ ಕಾಲೇಜು ಶೇ.೮೦ ಫಲಿತಾಂಶದೊಂದಿಗೆ ದ್ವಿತೀಯ, ಮುಳಬಾಗಿಲಿನ ಶಾರದಾ ಪಿಯು ಕಾಲೇಜು ಶೇ.೭೬ ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದಿದೆ.
ಸರ್ಕಾರಿ ಕಾಲೇಜುಗಳ ಪಟ್ಟಿಯಲ್ಲಿ ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಸರ್ಕಾರಿ ಪಿಯು ಕಾಲೇಜು ಶೇ.೯೦ ಫಲಿತಾಂಶದೊಂದಿಗೆ ಪ್ರಥಮ, ಕೋಲಾರ ತಾಲ್ಲೂಕಿನ ಮದನಹಳ್ಳಿ ಪಿಯು ಕಾಲೇಜು ಶೇ.೭೫ ಫಲಿತಾಂಶದೊಂದಿಗೆ ದ್ವಿತೀಯ ಹಾಗೂ ಮಾಸ್ತಿ ಸರ್ಕಾರಿ ಪಿಯು ಕಾಲೇಜು ಶೇ.೭೦.೪ ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದಿವೆ ಎಂದು ಪಿಯು ಡಿಸಿ ಎ.ಎನ್.ಗೀತಾ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss