ಉಡುಪಿ: ಕೋವಿಡ್ ಸಂಕಷ್ಟದ ನಡುವೆ ನಡೆದ ದ್ವಿತೀಯ ಪಿ.ಯು. ಪರೀಕ್ಷೆ ಫಲಿತಾಂಶ ಹೊರಗೆ ಬಿದ್ದಿದೆ. ಉಡುಪಿ ಜಿಲ್ಲೆ ಈ ಬಾರಿಯೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಶೇ. 90.71 ಫಲಿತಾಂಶ ದಾಖಲಿಸಿದೆ. ಕಳೆದ ಸಾಲಿನ ಸ್ಥಾನವನ್ನು ಉಡುಪಿ ಭದ್ರ ಪಡಿಸಿದ್ದರೂ ಶೇಕಡವಾರು ಫಲಿತಾಂಶದಲ್ಲಿ ಮಾತ್ರ ಇಳಿಕೆಯಾಗಿದೆ.
ಪಿಯು ಫಲಿತಾಂಶದಲ್ಲಿ ಕಳೆದ ವರ್ಷ ಉಡುಪಿ ಜಿಲ್ಲೆ ಶೇ. 92.20 ಫಲಿತಾಂಶ ಗಳಿಸಿ ಅಗ್ರ ಸ್ಥಾನದಲ್ಲಿತ್ತು. ಈ ವರ್ಷದ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ 1.49ರಷ್ಟು ಕಡಿಮೆಯಾಗಿದೆ. ಈ ಬಾರಿ ಉಡುಪಿ ಜಿಲ್ಲೆಯಲ್ಲಿ 13,802 ವಿದ್ಯಾರ್ಥಿಗಳು (ಫ್ರೆಶ್ಶರ್) ಪಿಯುಸಿ ಪರೀಕ್ಷೆ ಬರೆದಿದ್ದು, ಶೇ. 90.71 ಫಲಿತಾಂಶ ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ಖಾಸಗಿಯಾಗಿ 805 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇನ್ನು ಪುನರಾವರ್ತಿತ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 493. ಉಡುಪಿ ಜಿಲ್ಲೆಯಿಂದ ವಿಜ್ಞಾನ ವಿಭಾಗದಲ್ಲಿ 5,075 ವಿದ್ಯಾರ್ಥಿಗಳು, ಕಲಾ ವಿಭಾಗದಲ್ಲಿ 1,789 ಮತ್ತು ವಾಣಿಜ್ಯ ವಿಭಾಗದಲ್ಲಿ 8,236 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜಿಲ್ಲೆಯಲ್ಲಿ ಒಟ್ಟು 15,100 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ ಎಷ್ಟು ಮಂದಿ ಉತ್ತೀರ್ಣರಾಗಿದ್ದಾರೆ, ಶೇಕಡಾವಾರು ಫಲಿತಾಂಶದ ವಿವರ ಇನ್ನಷ್ಟೇ ಲಭಿಸಬೇಕಾಗಿದೆ.