ಮಂಗಳೂರು: ಸತತವಾಗಿ ಕಾಡುತ್ತಿರುವ ಮಾರಕ ಸೋಂಕು ಕೋವಿಡ್ 19 ಜನತೆಯ ನಿದ್ದೆಗೆಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಬರೋಬ್ಬರಿ 131 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದೇ ವೇಳೆ4 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಸೋಮವಾರ 43 ವರ್ಷದ ಮತ್ತು 60 ವರ್ಷದ ವ್ಯಕ್ತಿ ಹಾಗೂ ಜು.12ರಂದು 70 ವರ್ಷದ ವೃದ್ಧೆ ಹಾಗೂ 70 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ದ.ಕ. ಜಿಲ್ಲಾಡಳಿತದ ಸೋಮವಾರದ ಹೆಲ್ತ್ ಬುಲೆಟಿನ್ ನಲ್ಲಿ ಈ ವಿವರ ನೀಡಲಾಗಿದೆ.
ಸೋಮವಾರ ಜಿಲ್ಲೆಯಲ್ಲಿ ಒಟ್ಟು 131 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಈ ಪೈಕಿ ಪ್ರಾಥಮಿಕ ಸಂಪರ್ಕದಿಂದ 16 ಮಂದಿಗೆ ಸೋಂಕು ಹರಡಿದೆ. 63 ಸಾಮಾನ್ಯ ಶೀತ ಜ್ವರ ಪ್ರಕರಣ, 10 ಉಸಿರಾಟದ ಸಮಸ್ಯೆ, 4 ಮಂದಿ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದವರಲ್ಲಿ ಸೋಂಕು ಪತ್ತೆಯಾಗಿದೆ. 38 ಮಂದಿಯ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 2361 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಸೋಮವಾರ 62 ಮಂದಿ ಕೊರೋನಾ ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಪೈಕಿ 844 ಮಂದಿ ಸೋಂಕು ಮುಕ್ತರಾಗಿ ಮನೆಗೆ ತೆರಳಿದಂತಾಗಿದೆ.