ಮಂಗಳೂರು: ದುಬೈನಿಂದ ಮೇ 12ರಂದು ವಿಮಾನದ ಮೂಲಕ ಆಗಮಿಸಿದ ಅನಿವಾಸಿ ಭಾರತೀಯರಿಂದ ದ.ಕ. ಜಿಲ್ಲೆಯಲ್ಲಿ 15 ಕೊರೋನಾ ಸೋಂಕು ಪತ್ತೆಯಾದ ಆತಂಕ ಮಾಸುವ ಮುನ್ನವೇ ಮೇ 20 ರಂದು ಮಸ್ಕತ್ ಹಾಗೂ 22 ರಂದು ಕತಾರ್ನಿಂದ ಮಂಗಳೂರಿಗೆ ವಿಮಾನ ಆಗಮಿಸಲಿದೆ.
ದುಬೈನಿಂದ ಆಗಮಿಸುವವರು ತಮ್ಮ ಜತೆ ಕೋವಿಡ್ 19 ಹೊತ್ತು ತಂದು ತವರು ಜಿಲ್ಲೆಯಲ್ಲಿ ಭೀತಿ ಸೃಷ್ಟಿಸಿದ್ದರು. 176 ಪ್ರಯಾಣಿಕರ ಪೈಕಿ ಕರಾವಳಿಯ 21 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ಇದರಿಂದಾಗಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಏಕಾಏಕಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಮತ್ತೆ ಎರಡು ವಿಮಾನ ಆಗಮಿಸುವ ಸುದ್ದಿ ಜಿಲ್ಲೆಯ ಜನತೆಯಲ್ಲಿ ಭೀತಿಗೆ ಕಾರಣವಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಮೇ 20 ರಂದು ಮಸ್ಕತ್ನಿಂದ ಹಾಗೂ 22 ರಂದು ಕತಾರ್ನಿಂದ ಮಂಗಳೂರಿಗೆ ವಿಮಾನ ಆಗಮಿಸಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಮಾಹಿತಿ ನೀಡಿದರು. ದುಬೈನಿಂದ ಎರಡು ವಿಮಾನ ಈಗಾಗಲೇ ಆಗಮಿಸಿದೆ. ಸೌದಿ ಅರೇಬಿಯಾ ದೇಶದಿಂದ ಮಂಗಳೂರಿಗೆ ವಿಮಾನ ಆಗಮನದ ಬಗ್ಗೆ ಇನ್ನೂ ಯಾವುದೇ ನಿಗದಿಯಾಗಿಲ್ಲ ಎಂದು ತಿಳಿಸಿದರು.