ಹೊಸದಿಲ್ಲಿ : ದೇಶದಲ್ಲಿ ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳಿದ್ದು, ಈ ವೇಳೆ ದೇಶ ಬಾಂಧವರು ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸಂದೇಶ ಕಳುಹಿಸಿದ್ದಾರೆ .
ಒಂದೆಡೆ ಕೊರೋನಾ ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹಬ್ಬಗಳ ಹೆಸರಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಮರೆಯದಿರುವಂತೆ ಜನರಿಗೆ ಮನವಿದ್ದಾರೆ . ಮುಖ್ಯವಾಗಿ ಸಾಮಾಜಿಕ ಅಂತರವನ್ನು ಚಾಚೂ ತಪ್ಪದೇ ಪಾಲಿಸುವಂತೆ ಸಲಹೆ ನೀಡಿದ್ದಾರೆ.
ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸದೇ ಮನೆಯಲ್ಲೇ ಕುಟುಂಬಸ್ಥರೊಂದಿಗೆ ನೆಮ್ಮದಿಯಿಂದ ಆಚರಿಸುವಂತೆ ಸಲಹೆ ನೀಡಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಧರ್ಮದ ಮೇಲಿನ ನಿಮ್ಮ ನಂಬಿಕೆಯನ್ನು ಸಾಬೀತುಪಡಿಸಲು ಹೋಗಿ ಜೀವನವನ್ನು ಅಪಾಯಕ್ಕೆ ದೂಡಬೇಡಿ ಎಂದು ಕಳಕಳಿಯ ಮನವಿ ಮಾಡಿದ್ದಾರೆ.
ಯಾವ ಧರ್ಮವೂ ಜೀವನವನ್ನು ಅಪಾಯಕ್ಕೆ ತಳ್ಳಿ ಹಬ್ಬ ಆಚರಿಸಿ ಎಂದು ಹೇಳುವುದಿಲ್ಲ. ಧರ್ಮ ಹಾಗೂ ದೇವರ ಮೇಲಿನ ನಂಬಿಕೆ ಸಾಬೀತುಪಡಿಸಲು ವಿಜೃಂಭಣೆಯ ಹಬ್ಬದ ಆಚರಣೆಯ ಅವಶ್ಯಕತೆಯಿಲ್ಲ ಎಂದು ಹರ್ಷವರ್ಧನ್ ನುಡಿದಿದ್ದಾರೆ.