ಧಾರವಾಡ: ತಾಲ್ಲೂಕಿನ ಕುಂಬಾರಕೊಪ್ಪದ ಟೆನೆಂಟ್ ಕೋ ಆಪರೇಟಿವ್ ಸೊಸೈಟಿ 1200 ಎಕರೆ ಜಮೀನು ನಿರ್ವಹಣೆಯ ಕ್ರಮ ಬಗ್ಗೆ ವರದಿ ನೀಡಲು ನಾಲ್ಕು ಬಾರಿ ಪತ್ರ ಬರೆದರೂ, ನಿರ್ಲಕ್ಷ್ಯ ತೋರಿದೆ. ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಜರುಗಿಸುವ ಹಾಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಹಿಂದಿನ ಸಭೆಯಲ್ಲಿ ಟೆನೆಂಟ್ ಕೋ ಆಪರೇಟಿವ್ ಸೊಸೈಟಿ ಬಗ್ಗೆ ಚರ್ಚಿಸಿತ್ತು. ಸಭೆಯ ನಿರ್ಣಯದಂತೆ ನಾಲ್ಕು ಪತ್ರ ಬರೆದರೂ, ಸಂಬAಧಿಸಿದ ಸಂಸ್ಥೆ ನಿರ್ಲಕ್ಷ್ಯ ತೋರಿ, ಸಮಿತಿಗೆ ಅಗೌರವ ತೋರಿರುವದರಿಂದ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕಲಘಟಗಿ ತಾಲ್ಲೂಕಿನಲ್ಲಿ ಕಳೆದ 10 ವರ್ಷಗಳಲ್ಲಿ 6 ಜನರಿಗೆ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಈ ಪ್ರಮಾಣ ಪತ್ರಗಳನ್ನು ಹೊಂದಿರುವವರು ಬೇಡ ಜಂಗಮ ಜಾತಿಗೆ ಸೇರಿಲ್ಲವೆಂದು ದೃಢಪಟ್ಟಿರುವುದರಿಂದ ಅವರ ಪ್ರಮಾಣ ಪತ್ರ ರದ್ದುಪಡಿಸಲು ಕೋರಿ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ ಬಗ್ಗೆ ತಹಸೀಲ್ದಾರ್ ಅಶೋಕ ಶಿಗ್ಗಾಂವ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪೊಲೀಸ್ ಆಯುಕ್ತ ಆರ್.ದಿಲೀಪ್, ಉಪಪೊಲೀಸ್ ಆಯುಕ್ತ ಆರ್.ಬಿ.ಬಸರಗಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ, ಸಮಿತಿ ಸದಸ್ಯರಾದ ಕಾಡಯ್ಯ ಹೆಬ್ಬಳ್ಳಿಮಠ, ಇಂದುಮತಿ ಶಿರಗಾಂವ್, ಡಾ.ಇಸಾಬೆಲ್ಲಾ ಝೇವಿಯರ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಡಾ.ಸುಭಾಷ ನಾಟೀಕಾರ್ ಇದ್ದರು.