ಧಾರವಾಡ: ತಾಲೂಕಿನ ಗ್ರಾಮೀಣರ ಬಹುದಿನದ ಕನಸು ತುಪ್ಪರಿಹಳ್ಳ ಏತ ನೀರಾವರಿ ಹಾಗೂ ಅದರ ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮೀಣ ಶಾಸಕ ಅಮೃತ ದೇಸಾಯಿ ಸೋಮವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ದೇಸಾಯಿ, ತುಪ್ಪರಿಹಳ್ಳ ಜಿರ್ಣೋದ್ಧಾರಕ್ಕೆ ಡಿಪಿಆರ್ (ಯೋಜನಾ ವರದಿ) ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಗ್ರಾಮೀಣ ಭಾಗದ ರೈತರಿಗೆ ಏತ ನೀರಾವರಿ ಯೋಜನೆ ಸಫಲ ಮಾಡಲು ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಬರುವ ದಿನಗಳಲ್ಲಿ ರೈತರ ಹನಿ-ತುಂತುರು ನೀರಾವರಿ ಕನಸು ನನಸಾಗುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಪ್ಪರಿಹಳ್ಳ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಿತ್ತೂರ ಬಳಿ ಉಗಮಿಸಿ ಧಾರವಾಡ ಜಿಲ್ಲೆಯ ಹಳೆತೇಗೂರು, ಬೋಗೂರು, ಸಿಂಗನಹಳ್ಳಿ, ಅಗಸನಹಳ್ಳಿ, ಗರಗ, ಕೊಟಬಾಗಿ, ಲೋಕೂರು, ಉಪ್ಪಿನಬೆಟಗೇರಿ, ಕಲ್ಲೇ, ಕಬ್ಬೇನೂರ, ಹಾರೋಬೆಳವಡಿ ಗ್ರಾಮಗಳಲ್ಲಿ ಹರಿದು ನವಲಗುಂದ ಹತ್ತಿರ ಬೆಣ್ಣಿಹಳ್ಳ್ಕ ಸೇರುತ್ತದೆ ಎಂದರು.
ಒಟ್ಟು 82+20 ಕಿ.ಮೀ ಉದ್ದ ಇದ್ದು, ಒಟ್ಟು 1,123 ಚ. ಕೀ.ಮೀ ಜಲಾನಯನದ ಹೊಂದಿದೆ. ಮಳೆಗಾಲದಲ್ಲಿ 2.175 ಟಿಎಂಸಿ ನೀರಿನ ಲಭ್ಯತೆ ಇದೆ. ಆದರೆ, ಬ್ಯಾರೇಜ್ ಶೀತಲಾವ್ಯವಸ್ಥೆಯಲ್ಲಿದ್ದರಿಂದ ನೀರಿನ ಶೇಖರಣೆ ಕುಂದಿದ್ದು, ಬ್ಯಾರೇಜ್ಗಳ ಪುನಃಶ್ಚೇತನದಿಂದ ಏತ ನೀರಾವರಿ ಮೂಲಕ ತಾಲೂಕಿನ 20 ಹಳ್ಳಿಗಳ ಸುಮಾರು 10,000 ಹೆಕ್ಟರ ಜಮೀನುಗೆ ನೀರಾವರಿ ಕಲ್ಪಿಸಬಹುದೆಂದು ಹೇಳಿದರು.