ಧಾರವಾಡ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿ ಛಾಯಾಚಿತ್ರ ಸಹಿತ “ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್” ಮೂಲಕ ಸ್ವಯಂ ದಾಖಲಿಸುವ ವಿನೂತನ ಯೋಜನೆ ಪ್ರಾರಂಭಿಸಲಾಗಿದೆ.
ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಸಾಂಖ್ಯಿಕ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದ್ದು, ಸಂಗ್ರಹವಾದ ಬೆಳೆಗಳ ಮಾಹಿತಿ ತಾಲೂಕು ಆಡಳಿತ ಪರಿಶೀಲಿಸಲಿದೆ.
ದಾಖಲಿಸುವ ವಿಧಾನ:
ರೈತರು ಸ್ಮಾರ್ಟಫೋನ್ ಬಳಸಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ದಿಂದ ಡೌನಲೋಡ್ ಮಾಡಿಕೊಳ್ಳಬೇಕು ಅಥವಾ ಅವರ ಕುಟುಂಬದ ಸದಸ್ಯರು, ಮೊಬೈಲ್ ಮಾಹಿತಿ ಹೊಂದಿದ ಕಂದಾಯ, ಕೃಷಿ ಇಲಾಖೆಯಿಂದ ನಿಯೋಜನೆಗೊಂಡ, ಮಾಹಿತಿ ತಂತ್ರಜ್ಞಾನದ ತಿಳುವಳಿಕೆ ಇರುವ ಗ್ರಾಮದ ಯುವಕರ ಸಹಾಯದೂಂದಿಗೆ ರೈತರು ಮೊಬೈಲ್ ಸಂಖ್ಯೆಗೆ ಓಟಿಪಿ ಪಡೆಯುವ ಮೂಲಕ ತಮ್ಮ ಜಮೀನಿನಲ್ಲಿ (ಹಿಸ್ಸಾವಾರು) ಬೆಳೆದ ಬೆಳೆಗಳ ಮಾಹಿತಿ ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ದಾಖಲಿಸಬಹುದು.
ರೈತರು ನಿಗದಿತ ಸಮಯದೊಳಗೆ ಬೆಳೆದ ಬೆಳೆಗಳ ಮಾಹಿತಿಯನ್ನು ದಾಖಲಿಸದಿದ್ದ ಪಕ್ಷದಲ್ಲಿ ಪ್ರತಿ ಗ್ರಾಮಕ್ಕೆ ನಿಯೋಜನೆಗೊಂಡ ಬೆಳೆ ಸಮೀಕ್ಷಕರು (ಖಾಸಗಿ ನಿವಾಸಿ-ಪಿ.ಆರ್) ತಮ್ಮ ಹೊಲಗಳಿಗೆ ಭೇಟಿನೀಡಿ ಮೊಬೈಲ್ ಆ್ಯಪ್ ಬಳಸಿ ಬೆಳೆ ಮಾಹಿತಿ ಸಂಗ್ರಹಿಸಿ ಅಪಲೋಡ್ ಮಾಡುತ್ತಾರೆ.
ಬೆಳೆ ಸಮೀಕ್ಷೆ ಉದ್ದೇಶ:
ಬೆಳೆ ಸಮೀಕ್ಷೆ ಯೋಜನೆಯಡಿ ಸಂಗ್ರಹಿಸುವ ಮಾಹಿತಿ ಪ್ರಕೃತಿ ವಿಕೋಪದಲ್ಲಿ ಬೆಳೆ ಹಾನಿ ಬಗ್ಗೆ ಎನ್ಡಿಆರ್ಎಫ್- ಎಸ್ಡಿಆರ್ಎಫ್ ಅಡಿಯಲ್ಲಿ ಸಹಾಯಧನ ನೀಡಲು, ವರದಿ ತಯಾರಿಸಲು, ಬೆಳೆವಿಮೆ ನೋಂದಾಯಿತ ರೈತರ ತಾಕು ಹಂತದ ಬೆಳೆ ಪರಿಶೀಲಿಸಲು, ಕನಿಷ್ಠ ಬೆಂಬಲ ಬೆಲೆ ನಿಗದಿ, ಫಲಾನುಭವಿಗಳನ್ನು ಗುರುತಿಸಲು, ಸರ್ಕಾರದ ಯೋಜನೆಗಳಲ್ಲಿ ಬಳಸಿಕೊಳ್ಳಲು ಸಹಕಾರಿ ಆಗಲಿದೆ.
ಜಿಲ್ಲ್ಲೆಯ ರೈತರು ತಮ್ಮ ಜಮೀನುಗಳಲ್ಲಿ (ಹಿಸ್ಸಾವಾರು) ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ನಲ್ಲಿ ಕೊನೆಯ ದಿನಾಂಕದವರೆಗೆ ಕಾಯದೇ ಕೂಡಲೇ ಬೆಳೆಗಳ ಮಾಹಿತಿಯನ್ನು ನಿಗದಿತ ಸಮಯದೊಳಗೆ ಸ್ವಯಂ ದಾಖಲಿಸಬೇಕು.