Thursday, August 11, 2022

Latest Posts

ಧಾರವಾಡ| ರಾಜ್ಯಮಟ್ಟದ ಬಯಲಾಟ ಅಕಾಡೆಮಿ ಪ್ರಶಸ್ತಿ ಪ್ರದಾನ

ಹೊಸ ದಿಗಂತ ವರದಿ, ಧಾರವಾಡ:

ಕರ್ನಾಟಕ ಬಯಲಾಟ ಅಕಾಡೆಮಿ-ಬಾಗಲಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಭವನದಲ್ಲಿ 2019-20ನೇ ರಾಜ್ಯಮಟ್ಟದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ನಡೆಯಿತು.
ಸಮಾರಂಭದಲ್ಲಿ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ 2019-20ನೇ ಸಾಲಿನ ರೂ.50 ನಗದು ಅಕಾಡೆಮಿ ಗೌರವ ಪ್ರಶಸ್ತಿ ಡಾ. ಶ್ರೀಶೈಲ ಹುದ್ದಾರ ಹಾಗೂ ರೂ. 25 ನಗದು ಪುಸ್ತಕ ಬಹುಮಾನ ಪ್ರಶಸ್ತಿ ಎಂ.ಎಸ್.ಮಾಳವಾಡ ಅವರಿಗೆ ಸ್ಮರಣಿ, ಫಲಕ ನೀಡಿ ಗೌರವಿಸಿದರು.
ಪ್ರಶಸ್ತಿ ಪ್ರದಾನಿಸಿದ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ರಾಜ್ಯ ಸರ್ಕಾರ ಕೆಲ ಅಕಾಡೆಮಿ ತೆರೆದು ನಾಡಿನ ಪ್ರಾಚೀನ ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದೆ. ಇಂಥ ಕಲೆಗಳ ಉಳಿವಿಗೆ ಸರ್ಕಾರದೊಂದಿಗೆ ಸಮಾಜವೂ ಕೈಜೋಡಿಸಬೇಕೆಂದು ಹೇಳಿದರು.
ಟಿವಿ, ಮೊಬೈಲ್ ಹಾವಳಿಯಲ್ಲಿ ನಾಡಿನ ಜನಪದ, ಸಣ್ಣಾಟ, ದೊಡ್ಡಾಟ, ತೊಗಲು ಬೊಂಬೆಯಾಟ, ರಂಗಭೂಮಿ ಕಲೆಗಳು ಅವಸಾನದ ಹಾದಿ ಹಿಡಿದಿವೆ. ನಮ್ಮ ಪ್ರಾಚೀನ ಕಲೆ, ಸಂಸ್ಕೃತಿ-ಪರoಪರೆ ಪುನುರುಜ್ಜೀವನಗೊಳಿಸುವ ಕೆಲಸಕ್ಕೆ ಯುವಕರು ಕಂಕಣಬದ್ಧರಾಗಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಶ್ರೀಶೈಲ್ ಹುದ್ದಾರ, ಕರಾವಳಿಯ ಯಕ್ಷಗಾನಕ್ಕೆ ಸಿಕ್ಕೆ ಮಾನ್ಯತೆ, ಉತ್ತರ ಕರ್ನಾಟಕದ ದೇಶಿಯ ಕಲೆ ಮೂಡಲಪಾಯಕ್ಕೆ ಈವರೆಗೂ ಸಿಕ್ಕಿಲ್ಲ ಎಂದು ಬೇಸರಿಸಿದ ಅವರು, ಸಮನಾಂತರ ಕಲೆಗಳನ್ನು ಗುರುತಿಸುವ ಕೆಲಸ ಸರ್ಕಾರ ಮಾಡಬೇಕಿದೆಂದು ಹೇಳಿದರು.
ಮೂಡಲಪಾಯ 10ನೇ ಶತಮಾನದ ವೀರ ಕಲೆ. ರಾಮಾಯಣ-ಮಹಾಭಾರತ ಹೇಳುವ ಕಲೆ. ಹೀಗಾಗಿ ಈ ಕಲೆ ಉಳಿವು ಅಗತ್ಯ. ರಾಜ್ಯದ ವಿಶ್ವವಿದ್ಯಾಲಯಗಳು ಕೇವಲ ವಿದ್ಯಾರ್ಥಿಗಳಿಗೆ ಪುಸ್ತಕ ಜ್ಞಾನ ನೀಡಿದರೆ ಸಾಲದು. ಅವರಿಗೆ ಪ್ರಾಯೋಗಿಕವಾಗಿ ಜ್ಞಾನ ನೀಡಲಿ ಎಂದರು.
ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಚಂದ್ರಕಾoತ ಬೆಲ್ಲದ, ಕನ್ನಡ ಮತ್ತ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಸೇರಿದಂತೆ ಅನೇಕರು ಇದ್ದರು. ಗಾಣಿಗೇರ ನಿರೂಪಿಸಿ, ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss