ಕಾಸರಗೋಡು: ಕಾಸರಗೋಡು – ತಲಪ್ಪಾಡಿ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು , ಹಲವೆಡೆ ವಾಹನ ಸಂಚಾರಕ್ಕೆ ಅಪಾಯದ ಭೀತಿ ಎದುರಾಗಿದೆ. ಕಳೆದ ಕೆಲವು ದಿನಗಳ ಕಾಲ ಧಾರಾಕಾರವಾಗಿ ಮಳೆ ಸುರಿದಿರುವುದರಿಂದ ಹೈವೇ ಸ್ಥಿತಿ ಶೋಚನೀಯವಾಗಿದೆ.
ಕುಂಬಳೆಯಿಂದ ಕಾಸರಗೋಡು ತನಕದ ಹೆದ್ದಾರಿಯಲ್ಲಂತೂ ಸಂಚಾರ ಸಾಧ್ಯವೇ ಇಲ್ಲದಂತಾಗಿದೆ. ಕುಂಬಳೆ – ತಲಪ್ಪಾಡಿ ಹೈವೇ ಕೂಡ ಅನೇಕ ಕಡೆಗಳಲ್ಲಿ ಹೊಂಡಮಯವಾಗಿದೆ.
ಸರಿಸುಮಾರು ಹತ್ತು ದಿನಗಳ ಕಾಲ ಕಾಸರಗೋಡು ಜಿಲ್ಲೆಯಲ್ಲಿ ಸುರಿದ ಬಿರುಸಿನ ಮಳೆಗೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜಿಲ್ಲೆಯ ಹಲವು ರಸ್ತೆಗಳು ಸಂಪೂರ್ಣ ಶೋಚನೀಯ ಸ್ಥಿತಿಗೆ ತಲುಪಿವೆ. ಧಾರಾಕಾರ ಮಳೆ ಹಾಗೂ ಕೊರೋನಾ ಸಮಸ್ಯೆ ಸರಿಯಾಗುವ ಹೊತ್ತಲ್ಲಿ ಹೊಂಡ ಗುಂಡಿಗಳ ರಸ್ತೆಗಳಿಂದಾಗಿ ಸಾರಿಗೆ ಸಂಚಾರದಲ್ಲಿ ಸಂಕಷ್ಟ ಎದುರಾಗುವ ಆತಂಕ ಸೃಷ್ಟಿಯಾಗಿದೆ.
ಕಾಸರಗೋಡು – ತಲಪ್ಪಾಡಿ ಹೆದ್ದಾರಿಯ ಮೊಗ್ರಾಲ್, ಕುಂಬಳೆ, ಉಪ್ಪಳ ಸಹಿತ ಪ್ರಧಾನ ಸಿಟಿ ಕೇಂದ್ರಗಳು ಮಾತ್ರವಲ್ಲದೆ ಇನ್ನು ಕೆಲವು ಕಡೆಗಳಲ್ಲಿ ಭಾರೀ ಗಾತ್ರದ ಹೊಂಡಗಳು ರೂಪುಗೊಳ್ಳುತ್ತಿವೆ. ಈ ಮಧ್ಯೆ ಹೊಂಡ ಗುಂಡಿಗಳ ಆಳ, ವ್ಯಾಪ್ತಿಗೆ ಅನುಗುಣವಾಗಿ ಲೋಕೋಪಯೋಗಿ ಇಲಾಖೆಯು ಅಲ್ಲಲ್ಲಿ ಮುನ್ನೆಚ್ಚರಿಕೆ ಬೋರ್ಡ್ ಗಳನ್ನು ಕೂಡ ಸ್ಥಾಪಿಸಿವೆ. ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿಯಿಂದಾಗಿ ಈ ರೀತಿಯ ಹೊಂಡ ಗುಂಡಿಗಳು ಸೃಷ್ಟಿಯಾಗಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ತಲಪ್ಪಾಡಿಯಿಂದ ಮಂಗಳೂರು ವರೆಗಿನ ಹೈವೇಯು ಅತ್ಯಂತ ಸದೃಢವಾಗಿದ್ದು , ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಈ ಅನಾವಸ್ಥೆ ಕಂಡು ಬರುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಇನ್ನಾದರೂ ಕಾಸರಗೋಡು ಜಿಲ್ಲೆಯ ಲೋಕೋಪಯೋಗಿ ಇಲಾಖೆಯು ರಾಷ್ಟ್ರೀಯ ಹೆದ್ದಾರಿಯನ್ನು ಕೂಡಲೇ ದುರಸ್ತಿಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.