ಹೊಸದಿಲ್ಲಿ: ಐತಿಹಾಸಿಕ ಅನ್ಯಾಯ ಸರಿಪಡಿಸುವುದರೊಂದಿಗೆ, ನೆರೆಯ ದೇಶಗಳಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವ ಸಲುವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮಂಗಳವಾರ ಎನ್ ಸಿಸಿ 2020 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗಿನಿಂದಲೂ ಜಮ್ಮು ಕಾಶ್ಮೀರದ ಸಮಸ್ಯೆ ಕಠಿಣವಾಗುತ್ತ ಬಂದಿತ್ತು. ರಾಜಕೀಯ ಲಾಭಕ್ಕಾಗಿ ಕೆಲವು ಕುಟುಂಬಗಳು ಮತ್ತು ರಾಜಕೀಯ ಪಕ್ಷಗಳು ಕಾಶ್ಮೀರದ ಸಮಸ್ಯೆಯನ್ನು ಜೀವಂತವಾಗಿರಿಸಿದ್ದವು. ಇದರಿಂದಾಗಿ ಅಲ್ಲಿ ದಿನದಿಂದ ದಿನಕ್ಕೆ ಭಯೋತ್ಪಾದನೆ ಹೆಚ್ಚಾಗಿ ಜನರು ನರಳುವಂತಾಗಿತ್ತು ಎಂದರು.
ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಹಲವು ಕಾಲದಿಂದ ಜೀವಂತವಾಗಿದ್ದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನ ಮೂರು ಬಾರಿ ಯುದ್ಧದಲ್ಲಿ ಸೋತ್ತಿದ್ದರೂ ಭಾರತದ ವಿರುದ್ಧ ಕಳ್ಳ ಯುದ್ಧ ಮಾಡುವುದನ್ನು ಮುಂದುವರೆಸಿತ್ತು ಎಂದು ಮೋದಿ ವಾಗ್ದಾಳಿ ಮಾಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೋಡೋ ಶಾಂತಿ ಒಪ್ಪಂದ, ತ್ರಿವಳಿ ತಲಾಖ್, 370ನೇ ವಿಧಿ ರದ್ದು ಸೇರಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಜನರ ಭರವಸೆ ಈಡೇರಿಸಿದೆ ಎಂದು ಮೋದಿ ತಿಳಿಸಿದರು.