ಹೊಸದಿಗಂತ ಆನ್ಲೈನ್ ಡೆಸ್ಕ್:
ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ಕೋಳಿ ಸಾಕಾಣಿಕೆ ಮಾಡುವ ಕನಸಿಗೆ ತಣ್ಣೀರು ಬಿದ್ದಿದೆ.
ರಾಂಚಿಯ ತನ್ನ ವಿಸ್ತಾರವಾದ ಜಮೀನಿನಲ್ಲಿ ಧೋನಿ, ಕಡಕ್ನಾಥ್ ತಳಿ ಕೋಳಿ ಸಾಕಾಣಿಕೆ ಕೇಂದ್ರ ಮಾಡುವ ಕನಸು ಕಂಡಿದ್ದರು. ಇದಕ್ಕಾಗಿ ತನ್ನ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಸುಮಾರು 2 ಸಾವಿರ ಕೋಳಿಗಳನ್ನು ಕಳುಹಿಸಿಕೊಡುವಂತೆ ಮಧ್ಯ ಪ್ರದೇಶದ ಜಬುವಾ ಜಿಲ್ಲೆಯ ರೈತ ವಿನೋದ್ ಮೆಡ ಅವರಿಗೆ ಬೇಡಿಕೆಯನ್ನೂ ನೀಡಿದ್ದರು. ಈ ನಡುವೆ ವಿನೋದ್ ಮೆಡ ಅವರ ಸಾಕಾಣಿಕೆ ಕೇಂದ್ರದ ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಪರಿಣಾಮ ಇಲ್ಲಿಂದ ಧೋನಿ ತೋಟಕ್ಕೆ ಕೋಳಿಗಳನ್ನು ಕಳುಹಿಸಿಕೊಡಲು ಅವರಿಗೆ ಸಾಧ್ಯವಾಗುತ್ತಿಲ್ಲ.
ರಾಜ್ಯ ಪಶುಸಂಗೋಪನಾ ಇಲಾಖೆ ನಿರ್ದೇಶಕ ಡಾ. ಆರ್.ಕೆ. ರೊಕ್ಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾಲ್ಕೈದು ದಿನಗಳ ಹಿಂದೆ ಜಬುವಾ ಜಿಲ್ಲೆಯ ಕೋಳಿ ಫಾರ್ಮ್ನಿಂದ ಮಾದರಿಗಳನ್ನು ತರಿಸಿ ಭೋಪಾಲ್ ನ ನ್ಯಾಶನಲ್ ಇನ್ಸ್ ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಕೇಂದ್ರಕ್ಕೆ ಕಳುಹಿಸಿ ಪರೀಕ್ಷೆ ನಡೆಸಿದಾಗ ಹಕ್ಕಿ ಜ್ವರದ ಪಾಸಿಟಿವ್ ವರದಿ ಬಂದಿದ್ದು, ಇದರಿಂದ ಹೆಚ್5 ಎನ್ 1 ವೈರಸ್ ಬರುವ ಸಾಧ್ಯತೆಯಿದೆ ಎಂದಿದ್ದಾರೆ.
ಮಧ್ಯ ಪ್ರದೇಶದ 19 ಜಿಲ್ಲೆಗಳಲ್ಲಿ ಹಕ್ಕಿಜ್ವರ ದೃಢಪಟ್ಟಿದ್ದು, ಸುಮಾರು 1,400 ಕಾಗೆ, ಬಾಗುಲಾ ಮತ್ತು ಇತರ ಪಕ್ಷಿಗಳು ಮೃತಪಟ್ಟಿವೆ.