Tuesday, July 5, 2022

Latest Posts

ಧ್ವಂಸಗೊಂಡಿರುವ ಹಿಂದು ದೇವಾಲಯವನ್ನು ಪುನರ್ ಸ್ಥಾಪಿಸಿ: ಪಾಕ್ ಸುಪ್ರೀಂ ಕೋರ್ಟ್ ಆದೇಶ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪಾಕಿಸ್ತಾನದ ಇಸ್ಲಾಮಬಾದ್ ನ ತೇರಿ ಗ್ರಾಮದ ಕೃಷ್ಣ ದ್ವಾರ ಮಂದಿರ ಹಾಗೂ ಶ್ರೀ ಪರಮಹಂಸ ಮಹಾರಾಜರ ಸಮಾಧಿಯನ್ನು ಮರುಸ್ಥಾಪಿಸುವಂತೆ ಪಾಕ್ ಸುಪ್ರೀಂ ಕೋರ್ಟ್ ಪ್ರಾಂತೀಯ ಸರ್ಕಾರಕ್ಕೆ ಆದೇಶ ಹೊರಡಿಸಿದೆ.
ಕಳೆದ ವಾರ ಖೈಬರ್‌ ಪಂಕ್ತುಕ್ವಾ ಪ್ರಾಂತ್ಯದಲ್ಲಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ಹಿಂದು ದೇವಾಲಯದ ಮರುನಿರ್ಮಾಣ ಕೆಲಸ ಆರಂಭಿಸಿ, ಎರಡು ವಾರಗಳಲ್ಲಿ ಕೆಲಸದ ಪ್ರಗತಿಯ ಬಗ್ಗೆ ವರದಿ ನೀಡುವಂತೆ ಔಕಾಫ್ ವಿಭಾಗಕ್ಕೆ ಹಾಗೂ ಖೈಬರ್ ಪಖ್ತುನ್​ಖ್ವಕ್ಕೆ ನ್ಯಾಯಾಲಯ ಆದೇಶ ನೀಡಿದೆ. ಇನ್ನು ಕೂಡಲೇ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾದ ಜನರು, ದೇವಾಲಯದ ಮರುನಿರ್ಮಾಣಕ್ಕೆ ಹಣ ನೀಡಬೇಕು ಎಂದು ಕೂಡ ಮುಖ್ಯ ನ್ಯಾಯಾಧೀಶರು ಹೇಳಿಕೆ ನೀಡಿದ್ದಾರೆ.
ದೇಗುಲದ ಮೇಲಿನ ದಾಳಿಯಿಂದ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರದ ಸನ್ನಿವೇಶ ಎದುರಿಸಬೇಕಾಗಿದೆ ಎಂದು ನ್ಯಾಯಾಲಯ ಹೇಳಿತು. ದೇವಾಲಯದ ಮರುನಿರ್ಮಾಣ ಮಾಡುವಂತೆ ಅದು ‘ತೆರವಾದ ಆಸ್ತಿಗಳ ಟ್ರಸ್ಟ್‌ ಮಂಡಳಿ’ಗೆ (ಇಪಿಟಿಬಿ) ಸೂಚಿಸಿತು.
ಮುಖ್ಯ ನ್ಯಾಯಮೂರ್ತಿ ಗುಲ್ಜಾರ್‌ ಅಹ್ಮದ್‌ ಅವರನ್ನು ಒಳಗೊಂಡ ಮೂವರು ಸದಸ್ಯರ ನ್ಯಾಯಪೀಠವು ಮಂಗಳವಾರ ವಿಚಾರಣೆಯ ಸಂದರ್ಭದಲ್ಲಿ, ದೇಶದೆಲ್ಲೆಡೆ ದೇವಾಲಯಗಳ ಜಾಗದಲ್ಲಿ ಆಗಿರುವ ಅತಿಕ್ರಮಣಗಳನ್ನು ತೆರವು ಮಾಡಬೇಕು ಮತ್ತು ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದೂ ಇಪಿಟಿಬಿಗೆ ಆದೇಶ ನೀಡಿದೆ.
ವಿವರವಾದ ತೀರ್ಪನ್ನು ಎರಡು ವಾರಗಳಲ್ಲಿ ನೀಡುವುದಾಗಿ ನ್ಯಾಯಾಲಯ ತಿಳಿಸಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss