ಚಿಕ್ಕಮಗಳೂರು: ನಕಲಿ ಅಂಕಪಟ್ಟಿ ಹಾಗೂ ನಕಲಿ ವರ್ಗಾವಣೆ ಪತ್ರ ಸೃಷ್ಟಿಸಿ ಗ್ರಾಪಂ ಕಚೇರಿಯಲ್ಲಿ ನೀರಗಂಟಿ ಹುದ್ದೆ ಪಡೆದು ಸರ್ಕಾರವನ್ನು ವಂಚಿಸಿರುವ ಪ್ರಕರಣಕ್ಕೆ ಸಬಂಧಿಸಿದಂತೆ 48 ವರ್ಷಗಳ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡೂರು ತಾಲ್ಲೂಕು ಪಂಚನಹಳ್ಳಿಯ ಕುಂಕಾನಾಡು ಗ್ರಾ.ಪಂ.ನಲ್ಲಿ ಪ್ರಕರಣ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಅದೇ ಗ್ರಾಮದ ಅಂಜನಪ್ಪನ ಹೆಸರಿನಲ್ಲಿ 7ನೇ ತರಗತಿಗೆ ಸಂಬಂಧಿಸಿದ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕೊಟ್ಟಿದ್ದು, ಅಂಜನಪ್ಪ ಅವುಗಳ ಆಧಾರದಲ್ಲಿ ನೀರಗಂಟಿ ಹುದ್ದೆ ಗಿಟ್ಟಿಸಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಗ್ರಾಪಂ ಪಿಡಿಒ ಬಿ.ಟಿ.ಶಂಕರಪ್ಪ ಸೋಮವಾರ ಪಂಚನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ಅಂಜನಪ್ಪ 1978 ರಲ್ಲಿದ್ದ ಮುಖ್ಯೋಪಾಧ್ಯಾಯರ ನೆರವು ಪಡೆದು ನಕಲಿ ಅಂಕಪಟ್ಟಿ ಹಾಗೂ ವರ್ಗಾವಣೆ ಪತ್ರವನ್ನು ಗ್ರಾಪಂಗೆ ಸಲ್ಲಿಸಿದ್ದಾನೆನ್ನಲಾಗಿದ್ದು, ಕುಂಕಾನಾಡು ಸಹಿಪ್ರಾ ಶಾಲೆಯಲ್ಲಿ ಅಂದಿನ ಮುಖ್ಯೋಪಾಧ್ಯಾಯರು ಯಾರಿದ್ದರೆನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.