ಶಿವಮೊಗ್ಗ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯೇ ಪ್ರಾಧ್ಯಾಪಕ ಸಹೋದರರ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿದ್ದರೂ ಕುವೆಂಪು ವಿವಿ ಮಾತ್ರ ಇದುವರೆಗೂ ಕ್ರಮ ಕೈಗೊಳ್ಳದೇ ಇರುವುದು ಬೆಳಕಿಗೆ ಬಂದಿದೆ. ಇದು ವಿವಿ ನಡವಳಿಕೆಯ ಮೇಲೆಯೇ ಅನುಮಾನ ಮೂಡಿಸಿದೆ.
ಕುವೆಂಪು ವಿವಿಯ ರಾಜ್ಯಶಾಸ್ತ್ರ ವಿಭಾಗದಲ್ಲಿ ಡಾ.ಎ. ಷಣ್ಮುಖ ಎಂಬುವವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ವಿಶ್ವವಿದ್ಯಾಲಯದ ಬ್ಯಾಕ್ ಲಾಗ್ನ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲಿರಿಸಿದ ಕೋಟಾದಡಿ ತಾವು ವಾಲ್ಮೀಕಿ ನಾಯಕ ಜನಾಂಗಕ್ಕೆ ಸೇರಿದವರೆಂದು ಜಾತಿ ಪ್ರಮಾಣಪತ್ರ ಸಲ್ಲಿಸಿ ಆಯ್ಕೆಯಾಗಿದ್ದರು. ಇವರ ಜಾತಿ ಪ್ರಮಾಣಪತ್ರದ ಬಗ್ಗೆ ಸಾಕಷ್ಟು ಅನುಮಾನ ಹಾಗೂ ಜಾತಿ ಪ್ರಮಾಣಪತ್ರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಭದ್ರಾವತಿಯ ದಲಿತ ಸಂಘಟನೆಗಳ ಒಕ್ಕೂಟ ಮತ್ತು ಚಿಕ್ಕಮಗಳೂರು ಜಿಲ್ಲಾ ವಾಲ್ಮೀಕಿ ನಾಯಕ ಸಂಘದಿಂದ ಚಿಕ್ಕಮಗಳೂರು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ದೂರು ದಾಖಲಿಸಲಾಗಿತ್ತು. ದೂರು ಪರಿಶೀಲಿಸಿದ ಸಮಿತಿ, ಸಮಗ್ರ ದಾಖಲಾತಿಗಳನ್ನು ಆಧರಿಸಿ ಎ.ಷಣ್ಮುಖ ಅವರು ಇಡೀ ಕುಟುಂಬ ಪಡೆದುಕೊಂಡಿರುವ ವಾಲ್ಮೀಕಿ ನಾಯಕ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿ (2019ರ ಏಪ್ರಿಲ್ 29; ಸಂಖ್ಯೆ: ಜಾ.ಪ.ಸ:ಸಿಆರ್:03:2009-10)ಆದೇಶ ಹೊರಡಿಸಿದೆ !
2016ರಲ್ಲೇ ದಾಖಲಾಗಿತ್ತು ದೂರು..!: ಸದ್ಯ ಕುವೆಂಪು ವಿವಿ ಪ್ರಾಧ್ಯಾಪಕರಾಗಿರುವ ಎ. ಷಣ್ಮುಖ ಅವರ ಕುಟುಂಬ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂಸಿ ಹಳ್ಳಿಯಲ್ಲಿ ವಾಸವಾಗಿದ್ದಾರೆ. ಇವರ ಸಹೋದರ ವೇಲುಮುರುಗನ್ ಬಿನ್ ಆರ್ಮುಗಂ ಮತ್ತು ಇಡೀ ಕುಟುಂಬ ವಾಲ್ಮೀಕಿ ನಾಯಕ ಜನಾಂಗದ ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿತ್ತು. ಅಲ್ಲದೇ ಅದನ್ನೇ ಬಳಸಿಕೊಂಡು ಪರಿಶಿಷ್ಟ ಪಂಗಡಕ್ಕೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ.
ಇದನ್ನು ಗಮನಿಸಿ ಚಿಕ್ಕಮಗಳೂರು ಜಿಲ್ಲಾ ವಾಲ್ಮೀಕಿ ನಾಯಕ ಸಂಘ 2016ರಂದೇ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಜಾತಿ ಪ್ರಮಾಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದೂರು ಸಲ್ಲಿಸಿತ್ತು. 2016ರ ಜನವರಿ 18ರಂದು ಅಲ್ಲಿನ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದ್ದರು. ಈ ನಡುವೆ ತರೀಕೆರೆ ತಹಶೀಲ್ದಾರ್ 2014ರ ಜುಲೈ 1ರಂದೇ ಜಾತಿ ಪ್ರಮಾಣಪತ್ರಕ್ಕೆ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದರು. ಇದರ ವಿರುದ್ಧ ವೇಲುಮುರುಗನ್ ಕುಟುಂಬ ಹೈಕೋರ್ಟ್ ಮೊರೆ ಹೋಗಿತ್ತು. ಆಗ ಹೈಕೋರ್ಟ್ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಮಾತ್ರ ರದ್ದು ಮಾಡಬಹುದು ಎಂದು ಆದೇಶ ಹೊರಡಿಸಿತ್ತು.
ಕುವೆಂಪು ವಿವಿ ಮೀನಮೇಷ: ವೇಲುಮುರುಗನ್ ಮೂವರು ಸಹೋದರರನ್ನು ಹೊಂದಿದ್ದಾರೆ. ಅದರಲ್ಲಿ ಎರಡನೇ ಸಹೋ ದರ ವಡಿವೇಲು ಕುವೆಂಪು ವಿವಿ ಎಕನಾಮಿಕ್ಸ್ ವಿಭಾಗ ಹಾಗೂ ಕೊನೆಯ ಸಹೋದರ ಎ. ಷಣ್ಮುಗಂ ಕುವೆಂಪು ವಿವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕ ರಾಗಿದ್ದಾರೆ. ಇಡೀ ಕುಟುಂಬದ ಜಾತಿ ಪ್ರಮಾಣಪತ್ರ ರದ್ದಾದ ಹಿನ್ನೆಲೆಯಲ್ಲಿ 2019ರ ನವೆಂಬರ್ 11ರಂದು ಷಣ್ಮುಗಂ ಅವರನ್ನು ಪ್ರಾಧ್ಯಾಪಕ ಹುದ್ದೆಯಿಂದ ಕೈಬಿಡುವಂತೆ ಕೋರಿ ಮನವಿ ಸಲ್ಲಿಸಲಾಗಿತ್ತು. ಆದರೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಿದ್ದ ವಿವಿ ಇನ್ನೂ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನ ಗಳನ್ನು ಸೃಷ್ಟಿಸಿದೆ. ಅರ್ಹತೆ ಇಲ್ಲದ ಮೇಲೂ ಲಕ್ಷಾಂತರ ರೂ. ವೇತನ ದೊರೆಯುವಂತೆ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. |
-ಸುಬ್ರಹ್ಮಣ್ಯ ಸಿ. ಹೊರಬೈಲು