Wednesday, August 17, 2022

Latest Posts

ನಕಲಿ ದಾಖಲೆ ಸೃಷ್ಟಿಸಿ, ಬ್ಯಾಂಕ್‌ನಿoದ 3 ಕೋ.ರೂ.ಲೋನ್ ಪಡೆಯಲು ಯತ್ನ: ಐವರು ವಂಚಕರ ಬಂಧನ

ಹೊಸ ದಿಗಂತ ವರದಿ, ಮೈಸೂರು:

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 6 ಕೋಟಿ ರೂ. ಮೌಲ್ಯದ ನಿವೇಶನಕ್ಕೆ ಅಸಲಿ ಎಂದೇ ಮೇಲು ನೋಟಕ್ಕೆ ಕಾಣುವಂತೆ ನಕಲಿ ದಾಖಲೆಗಳನ್ನುಸೃಷ್ಟಿಸಿ, ಬ್ಯಾಂಕ್‌ವೊoದರಿoದ ಬರೋಬರೀ 3 ಕೋಟಿ ರೂ. ಲೋನ್ ಪಡೆಯಲು ವಂಚಕರು ಯತ್ನಿಸಿದ ಪ್ರಕರಣವೊಂದು ಬಯಲಿಗೆ ಬಂದಿದ್ದು, ವಕೀಲೆ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರೊಂದಿಗೆ ಸೇರಿ, ಪೊಲೀಸರೊಂದಿಗೆ ನಡೆಸಿದ ಕಾರ್ಯಚರಣೆಯಲ್ಲಿ ಐವರು ವಂಚಕರು ಬಲೆ ಬಿದಿದ್ದಾರೆ.
ವಕೀಲರು ಹಾಗೂ ಮುಡಾ ಅಧ್ಯಕ್ಷರ ಸಮಯ ಪ್ರಜ್ಞೆಯಿಂದ ಎಸ್ ಬಿಐ ಬ್ಯಾಂಕ್ ವಂಚಕರಿಗೆ 3 ಕೋಟಿ ರೂ. ಲೋನ್ ನೀಡಿ, ವಂಚನೆಗೊಳಗಾಗುವುದು ತಪ್ಪಿದೆ.
1961ರಲ್ಲಿ ಮುಡಾದಿಂದ ಮಹಿಳೆಯೊಬ್ಬರಿಗೆ ಮೈಸೂರಿನ ಯಾದವಗಿರಿಯಲ್ಲಿ 30×70 ಅಳತೆಯ ನಿವೇಶನವನ್ನು ಮಂಜೂರು ಮಾಡಲಾಗಿತ್ತು. ಆದರೆ ಆ ಮಹಿಳೆ ನಿವೇಶನವನ್ನು ಸ್ವಾಧೀನಕ್ಕೆ ತೆಗೆದುಕೊಂಡಿರಲಿಲ್ಲ. ಹೀಗಾಗಿ ಆಕೆಗೆ ನೀಡಿದ್ದ ನಿವೇಶನದ ಮಂಜೂರಾತಿಯನ್ನು ಮುಡಾ ರದ್ದುಗೊಳಿಸಿತ್ತು. ಹಾಗಾಗಿ ಆ ನಿವೇಶನ ಮುಡಾದ ವಶದಲ್ಲಿಯೇ ಉಳಿದಿತ್ತು. ಈ ನಿವೇಶನದ ಮೇಲೆ ಕಣ್ಣು ಹಾಕಿದ ವಂಚಕರು, ಈ ನಿವೇಶನ 80x 100 ಅಡಿ ಅಳತೆಯನ್ನು ಹೊಂದಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅದನ್ನು ಮಾರಾಟ ಮಾಡಿರುವ ದಾಖಲೆಗಳನ್ನು ಒರಿಜನಲ್‌ನಂತೆ ತಯಾರಿಸಿದ್ದರು. ಅದನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಬರೋ ಬರೀ 30 ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಟ್ಟಿದ್ದರು. ಇದನ್ನು ಪಡೆದುಕೊಂಡಿದ್ದ ಈ ವ್ಯಕ್ತಿ 6 ಕೋಟಿ ರೂ ಮೌಲ್ಯದ ನಿವೇಶನವನ್ನು ಆಧಾರವಾಗಿಟ್ಟುಕೊಂಡು 3 ಕೋಟಿ ರೂ. ಸಾಲವನ್ನು ನೀಡಬೇಕೆಂದು ನಕಲಿ ದಾಖಲೆಗಳನ್ನು ಎಸ್‌ಬಿಐ ಬ್ಯಾಂಕಿಗೆ ಸಲ್ಲಿಸಿದ್ದರು.
ಬ್ಯಾಂಕಿನ ಅಧಿಕಾರಿಗಳು, ಇದು ದೊಡ್ಡ ಮೊತ್ತದ ಸಾಲವಾದ ಕಾರಣ, ಸಾಲ ನೀಡಲು ಅನುಮತಿ ಕೋರಿ ಕೇಂದ್ರ ಬ್ಯಾಂಕ್‌ಗೆ ವ್ಯಕ್ತಿ ಸಲ್ಲಿಸಿದ್ದ ದಾಖಲೆಗಳನ್ನು ಕಳುಹಿಸಿದ್ದರು. ಸಾಲ ಕೊಡುವ ಬಗ್ಗೆ ಲೀಗಲ್ ಒಪಿನಿಯನ್ ಕೇಳಿ ಕೇಂದ್ರ ಬ್ಯಾಂಕ್ ವಕೀಲೆ ಸ್ಮೀತಾ ದೇವಿ ಅವರಿಂದ ಅಭಿಪ್ರಾಯವನ್ನು ಪಡೆದುಕೊಂಡು ಬರುವಂತೆ ಸಾಲ ಕೇಳಿದ ವ್ಯಕ್ತಿಗೆ ಸೂಚಿಸಿತ್ತು. ಹಾಗಾಗಿ ಮಧ್ಯರ್ತಿಯೊಂದಿಗೆ ಮೂರು ಮಂದಿ ವಕೀಲೆ ಸ್ಮೀತಾದೇವಿ ಅವರನ್ನು ಮೈಸೂರಿನಲ್ಲಿರುವ ಅವರ ಕಚೇರಿ ಭೇಟಿ ಮಾಡಿ, 3 ಕೋಟಿ ರೂ ಸಾಲವನ್ನು ಬ್ಯಾಂಕ್‌ನಿoದ ಪಡೆಯಲು ತಮ್ಮ ಅಭಿಪ್ರಾಯವನ್ನು ಬರೆದುಕೊಡುವಂತೆ ಕೇಳಿದರು. ಆಗ ಸಂಬoಧಿಸಿದ ದಾಖಲೆಗಳನ್ನು ನೀಡಿದರು. ಮೇಲು ನೋಟಕ್ಕೆ ದಾಖಲೆಗಳು ಅಸಲಿಯಂತೆ ಕಾಣುತ್ತಿದ್ದರೂ, ಯಾಕೋ ಈ ದಾಖಲೆಗಳು ನಕಲಿಯಾಗಿವೆ ಎಂದು ಸ್ಮೀತಾ ದೇವಿ ಅವರಿಗೆ ಅನಿಸಿದೆ.
ಕೂಡಲೇ ಆ ಮೂರು ಮಂದಿಗೆ ಒರಿಜನಲ್ ದಾಖಲೆಗಳನ್ನು ತಂದು ಕೊಟ್ಟರೆ, ತಾವು ಅದನ್ನು ಪರಿಶೀಲಿಸಿ, ಸಾಲ ಕೊಡುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಬರೆದುಕೊಡುವುದಾಗಿ ತಿಳಿಸಿದ್ದಾರೆ. ನಿವೇಶನ ಖರೀದಿಸುವವರ ಬಳಿ ಒರಿಜಿನಲ್ ದಾಖಲೆಗಳಿವೆ ಅವುಗಳನ್ನು ತಂದುಕೊಡುವುದಾಗಿ ಹೇಳಿ ಹೋಗಿದ್ದಾರೆ. ಅದಾದ ಬಳಿಕ ಕೆಲವು ಗಂಟೆಗಳ ಬಳಿಕ ವಕೀಲೆ ಸ್ಮೀತಾ ದೇವಿ ಅವರಿಗೆ ದೂರವಾಣಿ ಕರೆ ಮಾಡಿ, ನಿವೇಶನಕ್ಕೆ ಬಂಡವಾಳ ಹಾಕುವವರು ಹೂಡಿಕೆ ಮಾಡುವುದಿಲ್ಲ ಎಂದು ಈಗ ತಿಳಿಸಿದ್ದಾರೆ. ಹಾಗಾಗಿ ನಾವು ಕೊಟ್ಟಿರುವ ದಾಖಲೆಗಳನ್ನು ವಾಪಾಸ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಇದರಿಂದಾಗಿ ವಕೀಲೆ ಸ್ಮೀತಾ ದೇವಿ ಅವರಿಗೆ ಇದೊಂದು ದೊಡ್ಡ ವಂಚನೆಯ ಪ್ರಕರಣ ಎಂಬುದು ತಿಳಿದು ಹೋಗಿದೆ. ಆದರೂ ಕೂಡ ಈ ಬಗ್ಗೆ ಕ್ರಾಸ್ ಚೆಕ್ ಮಾಡೋಣ ಎಂದು ಸಬ್ ರಿಜಿಸ್ಟರ್ ಕಚೇರಿಗೆ ಹೋಗಿ ನಿವೇಶನದ ಸಂಖ್ಯೆ, ಅದರ ದಾಖಲೆಗಳು, ವಂಚಕರು ನೀಡಿರುವ ದಾಖಲೆಗಳನ್ನು ತಾಳೆ ನೋಡಿದ್ದಾರೆ. ಅಲ್ಲಿ ಒಂದುಕೊoದು ತಾಳೆ ಆಗಿಲ್ಲ, ಆಗ ನಿವೇಶನ ಮಂಜೂರು ಮಾಡಿದ್ದಾಗ ಮುಡಾ ಅಧ್ಯಕ್ಷರಾಗಿದ್ದರು ಬೇರೆ, ವಂಚಕರು ನೀಡಿರುವ ದಾಖಲೆಯಲ್ಲಿ ಇರುವ ಹೆಸರು, ಸಹಿಯೇ ಬೇರೆ, ಅಷ್ಟು ಮಾತ್ರವಲ್ಲ, ವಂಚಕರು ನೀಡಿದ್ದ ದಾಖಲೆಯಲ್ಲಿ ಸಬ್ ರಿಜಿಸ್ಟರ್ ಕಚೇರಿಯ ಸಹಿ, ಸೀಲು ಕೂಡ ನಕಲಿ ಎಂಬುದು ಕಚೇರಿಯ ಸಿಬ್ಬಂದಿ, ಅಧಿಕಾರಿಗಳು ನೀಡಿದ ಮಾಹಿತಿಯಿಂದ ದೃಢವಾಗಿದೆ.

ವಂಚಕರನ್ನು ಖೆಡ್ಡಾಗೆ ಕೆಡವಲು ರೆಡಿಯಾಯಿತು ಪ್ಲಾನ್
ಬಹುದೊಡ್ಡ ವಂಚನೆಯ ಪ್ರಕರಣದ ಬಗ್ಗೆ ಕೂಡಲೇ ವಕೀಲೆ ಸ್ಮೀತಾದೇವಿ ಅವರು ಮೈಸೂರಿನ ಲಕ್ಷಿöಪುರಂ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರಿಗೆ ಇಡೀ ವಂಚನೆಯ ಪ್ರಕರಣದ ಬಗ್ಗೆ ದಾಖಲೆಗಳೊಂದಿಗೆ ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ತಮ್ಮ ಕಚೇರಿಯ ಅಧಿಕಾರಿಗಳಿಂದ ವಂಚಕರು ನೀಡಿದ್ದ ನಿವೇಶನದ ದಾಖಲೆಗಳ ಪರಿಶೀಲನೆಯನ್ನು ನಡೆಸಿದ ಹೆಚ್.ವಿ.ರಾಜೀವ್ ಅವರು, ಇದೊಂದು ದೊಡ್ಡ ವಂಚನೆ ಪ್ರಕರಣ ಎಂದು ಮನವರಿಕೆಯಾಗುತ್ತಿದ್ದಂತೆ ವಂಚಕರನ್ನು ಸೆರೆ ಹಿಡಿಯಲು ಪ್ಲಾನ್ ರೂಪಿಸಿದ್ದಾರೆ.
ಕೂಡಲೇ ಡಿಸಿಪಿ ಪ್ರಕಾಶ್‌ಗೌಡರಿಗೆ ಮಾಹಿತಿಯನ್ನು ನೀಡಿ,ವಂಚಕರನ್ನು ಸೆರೆ ಹಿಡಿಯಲು ಸಹಕಾರ ಕೋರಿದ್ದಾರೆ. ಅದರಂತೆ ಮಪ್ತಿಯಲ್ಲಿ ಪೊಲೀಸರು, ಮುಡಾದ ಅಧಿಕಾರಿಗಳು, ಸ್ಮೀತಾ ದೇವಿ ಅವರ ಕಚೇರಿ ಬಳಿ ಕಾದಿದ್ದು, ನಿವೇಶನಕ್ಕೆ ಸಂಬoಧಿಸಿದoತೆ ಕೊಟ್ಟಿದ್ದ ನಕಲಿ ದಾಖಲೆಗಳನ್ನು ವಾಪಾಸ್ ತೆಗೆದುಕೊಳ್ಳಲು ಬಂದ ಮೂವರನ್ನು ಕೂಡಲೇ ಬಂಧಿಸಲಾಗಿದೆ. ಆ ಮೂವರನ್ನು ತಮ್ಮ ವಶಕ್ಕೆ ತೆಗೆದುಕೊಂಡ ಲಕ್ಷಿö್ಮಪುರಂ ಠಾಣೆಯ ಪೊಲೀಸರು ವಿಚಾರಣೆ ನಡೆಸಿದಾಗ, ಅದರಲ್ಲಿ ಒಬ್ಬಾತ ದಳ್ಳಾಲಿ ಎಂಬುದು ಗೊತ್ತಾಗಿದೆ. ವಂಚಕರು ತಮ್ಮ ನಿಜವಾದ ಹೆಸರು, ಮನೆ ವಿಳಾಸ ತಿಳಿಸದೆ ಪೊಲೀಸರನ್ನೇ ಯಾಮಾರಿಸಲು ಪ್ರಯತ್ನಿಸಿದ್ದಾರೆ. ಆದರೆ ಪೊಲೀಸರು ತಮ್ಮ ಶೈಲಿಯನ್ನು ಅವರ ಮೇಲೆ ಪ್ರಯೋಗಿಸಿದಾಗ, ಇನ್ನಿಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ಅವರನ್ನೂ ಬಂಧಿಸಿರುವ ಪೊಲೀಸರು, ಈ ವಂಚನೆಯ ಸೂತ್ರದಾರ ಎಲ್ಲಿಯವ ಎಂದು ತನಿಖೆ ನಡೆಸಿದಾಗ, ಆತ ಬೆಂಗಳೂರಿನ ವ್ಯಕ್ತಿ, ವಂಚನೆಯನ್ನೇ ತನ್ನ ಕಸುಬನ್ನಾಗಿ ಮಾಡಿಕೊಂಡು, ಈ ದಂಧೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ವ್ಯಕ್ತಿ ಎಂಬುದು ಮೇಲು ನೋಟಕ್ಕೆ ಬಂಧಿತರು ನೀಡಿದ ಮಾಹಿತಿಯಿಂದ ಕಂಡು ಬಂದಿದೆ. ಆದರೆ ವಂಚನೆಯ ಕಿಂಗ್ ಫಿನ್ ಯಾರು ಎಂದು ಪತ್ತೆಹಚ್ಚಲು ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.
ಮುಡಾ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ನಿವೇಶನದ ವಂಚನೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ವಂಚಕರನ್ನು ಸೆರೆ ಹಿಡಿಯಲು ದಿಟ್ಟತನ ತೋರಿದ ವಕೀಲೆ ಸ್ಮೀತಾ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!