ಶಿವಮೊಗ್ಗ: ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಆರೋಪದ ಮೇರೆಗೆ ಬಂಧಿತರಾಗಿರುವ ಶೋಭಾಳನ್ನು ಬಾಡಿ ವಾರಂಟ್ ಮೇಲೆ
ತೀರ್ಥಹಳ್ಳಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಬಳಿಕ ಪೋಲಿಸ್ ವಶಕ್ಕೆ ಪಡೆಯಲಾಗಿದೆ.
2012 ರಲ್ಲಿ ಬರ್ಕಣ ಫಾಲ್ಸ್ ಬಳಿ ನಡೆದಿದ್ದ ಫೈರಿಂಗ್ ನಲ್ಲಿ ಶೋಭಾ ಭಾಗಿಯಾಗಿದ್ದರು ಎಂದು ದೂರು ದಾಖಲಿಸಲಾಗಿತ್ತು.
ಫೈರಿಂಗ್ ಪ್ರಕರಣದ ನಂತರ ಶೋಭಾ ತಲೆ ಮರೆಸಿಕೊಂಡಿದ್ದರು. ಕಳೆದ ಮಾರ್ಚ್ನಲ್ಲಿ ಶೋಭಾರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದರು. ಶೋಭಾ 11 ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಎಂಬ ಆರೋಪವಿದೆ. ಇವರ ವಿರುದ್ಧ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ 6 ಕ್ಕೂ ಅಧಿಕ ಪ್ರಕರಣಗಳಿವೆ.
ಆಗುಂಬೆ ತಲ್ಲೂರು ಅಂಗಡಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸುಟ್ಟ ಪ್ರಕರಣ ಹಾಗೂ ಹಳ್ಳಿ ಬಿದರಗೋಡಿನಲ್ಲಿ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲೂ ಈಕೆಯ ಪಾತ್ರವಿದೆ ಎಂಬ ಆರೋಪವಿದೆ.
ಶೋಭಾ ಮೂಲತಃ ಹೊಸನಗರ ತಾಲೂಕಿನ ಮೇಲುಸಂಕದವರು. ಸದ್ಯ ಶೋಭಾರನ್ನು ತಮಿಳುನಾಡಿನ ಕೊಯಂಬತ್ತೂರು ಜೈಲ್ ನಲ್ಲಿ ಇಡಲಾಗಿತ್ತು.
ಈಕೆಯನ್ನು ಕರೆ ತಂದಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.