Saturday, August 13, 2022

Latest Posts

ನಗರದ ಜನರಲ್ಲಿ ಕೊರೋನಾ ಆತಂಕ; ಹಳ್ಳಿಯ ದನಗಳಲ್ಲಿ ಗಂಟು ರೋಗದ ಭೀತಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ಎಂ.ಜೆ.ತಿಪ್ಪೇಸ್ವಾಮಿ

ಒಂದು ಕಾಲದಲ್ಲಿ ಆಫ್ರಿಕಾ ಖಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಚರ್ಮಗಂಟು ರೋಗ (ಎಲ್‌ಎಸ್‌ಡಿ) ಇದೇ ಮೊದಲ ಬಾರಿಗೆ ಕರ್ನಾಟಕ, ಜಿಲ್ಲೆಯಲ್ಲ್ಲೂ ಕಂಡುಬಂದಿದೆ. ಇದು ರಾಸುಗಳನ್ನು ಕೇವಲ ಮಾರ‍್ನಾಲ್ಕು ದಿನಗಳಲ್ಲೇ ಬಸವಳಿಯುವಂತೆ ಮಾಡುತ್ತಿದೆ. ರೋಗ ತಗುಲಿದ ಜಾನುವಾರುಗಳಿಗೆ ಕಚ್ಚುವ ನೊಣ ಅಥವಾ ಸೊಳ್ಳೆಗಳು, ನಂತರ ಆರೋಗ್ಯವಂತ ಜಾನುವಾರುಗಳಿಗೆ ಕಡಿಯುವುದರಿಂದ ಈ ರೋಗ ವ್ಯಾಪಕವಾಗಿ ಹರಡುತ್ತಿದೆ. ಹಾಗಾಗಿ ಇದನ್ನು ಸಹ ಸೋಂಕು ರೋಗ ಎಂದು ಪರಿಗಣಿಸಲಾಗಿದೆ.
ರಾಸುಗಳಿಗೆ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಕಾಲುಗಳಲ್ಲಿ ಬಾವು ಉಂಟಾಗಿ ನಡೆದಾಡುವಾಗ ಕುಂಟಲು ಆರಂಭಿಸುತ್ತವೆ. ಬಳಿಕ ಕಣ್ಣಲ್ಲಿ ನೀರು ಸುರಿಯುತ್ತದೆ. ಮೇವು ತಿನ್ನುವುದು, ನೀರು ಕುಡಿಯುವುದನ್ನು ಬಿಡುತ್ತವೆ. ಕ್ರಮೇಣ ಒಂದು ವಾರದೊಳಗೆ ಮೈಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಗುಳ್ಳೆ ಒಡೆದು ರಕ್ತ ಸೋರಿಕೆಯಾಗುತ್ತದೆ. ಈ ಹಂತದಲ್ಲಿ ರಾಸುಗಳು ದೈಹಿಕವಾಗಿ ಶಕ್ತಿಹೀನವಾಗಿ ನಿತ್ರಾಣಗೊಳ್ಳುತ್ತವೆ. ಜಿಲ್ಲೆಯ ಹಳ್ಳಿಗಾಡಿನಲ್ಲಿ ಗಂಟುರೋಗ ಕಾಣಿಸಿಕೊಂಡಿದ್ದು, ಹಳ್ಳಿಗಾಡಿನ ರೈತರು, ಪಶುಪಾಲಕರನ್ನು ಆತಂಕಕ್ಕೆ ಈಡು ಮಾಡಿದೆ.
ಜಿಲ್ಲೆಯ ಯಾವುದಾದರೂ ಗ್ರಾಮದ ಜಾನುವಾರುಗಳಲ್ಲಿ ಈ ರೋಗದ ಲಕ್ಷಣ ಕಂಡುಬಂದಲ್ಲಿ ರಾಸುಗಳನ್ನು ಹೊರಗೆ ಬಿಡದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಸೋಂಕಿತ ರಾಸುವಿನ ಐದು ಕಿ.ಮೀ. ವ್ಯಾಪ್ತಿಯಲ್ಲಿ ಇರುವ ಆರೋಗ್ಯವಂತ ರಾಸುಗಳಿಗೆ ರೋಗ ನಿರೋಧಕ ಔಷಧಿ (ವ್ಯಾಕ್ಸಿನ್) ನೀಡಲಾಗುತ್ತಿದೆ. ಗುಳ್ಳೆ ಒಡೆದ ಚರ್ಮದ ಮಾದರಿಯನ್ನು ತ್ವರಿತವಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.
ಕೊರೋನಾ ತಗುಲಿದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡುವ ರೀತಿಯಲ್ಲೇ ಗಂಟುರೋಗ ತಲುಲಿದ ಜಾನುವಾರುಗಳನ್ನು ೧೫ ದಿನ ಕ್ವಾರಂಟೈನ್ ಮಾಡಲಾಗುತ್ತಿದೆ. ಅವುಗಳನ್ನು ಇತರೆ ರಾಸುಗಳಿಂದ ಪ್ರತ್ಯೇಕವಾಗಿರಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈ ರೋಗ ತಲುಲಿದ ರಾಸುಗಳು ತೀವ್ರತರವಾದ ನೋವು ಅನುಭವಿಸುತ್ತಿರುವುದು ಕಂಡುಬಂದಿದೆ. ಹಾಗಾಗಿ ರೋಗ ಬಾಧೆಯಿಂದ ಬಳಲುವ ರಾಸುಗಳಿಗೆ ಹೆಚ್ಚಾಗಿ ನೋವು ನಿವಾರಕ ಔಷಧ ಬಳಸಲಾಗುತ್ತಿದೆ.
ಗ್ರಾಮೀಣ ಭಾಗದ ನೂರಾರು ಸಂಖ್ಯೆಯ ಜಾನುವಾರುಗಳಿಗೆ ರೋಗದ ಸೋಂಕು ಹರಡಿದೆ. ಇಲಾಖೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮದಿಂದಾಗಿ ಅಧಿಕ ಸಂಖ್ಯೆಯ ರಾಸುಗಳಿಗೆ ಈ ರೋಗ ಹರಡಿಲ್ಲ. ಎಮ್ಮೆಗಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿರುವ ಪ್ರಮಾಣ ತೀರಾ ಕಡಿಮೆ. ಜಿಲ್ಲೆಯಲ್ಲಿ ಈ ರೋಗ ಕಾಣಿಸಿಕೊಂಡಾಗ ಅನೇಕ ರೈತರು ಆತಂಕಕ್ಕೆ ಒಳಗಾಗಿದ್ದರು. ಇದು ಸಂಪೂರ್ಣ ಗುಣವಾಗುವ ಕಾಯಿಲೆಯಾಗಿದೆ. ರೋಗ ಬಂದ ಕೂಡಲೇ ರಾಸುಗಳನ್ನು ತಪಾಸಣೆಗೆ ಒಳಪಡಿಸಬೇಕು. ಯಾವುದೇ ಆತಂಕ ಬೇಡ ಎಂದಿದ್ದಾರೆ ಅಧಿಕಾರಿಗಳು.
ಜಿಲ್ಲೆಯಲ್ಲಿ ೩.೩೯ ಲಕ್ಷ ದನ, ಎಮ್ಮೆಗಳು, ೧೭.೫ ಲಕ್ಷ ಕುರಿ, ಮೇಕೆಗಳು ಸೇರಿ ಒಟ್ಟು ೨೧ ಲಕ್ಷಕ್ಕೂ ಹೆಚ್ಚು ಜಾನುವಾರುಗಳಿವೆ. ೧೪೩ ಗ್ರಾಮಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ೧೪೭೪ ರಾಸುಗಳಿಗೆ ಸೋಂಕು ತಗುಲಿದೆ. ೧೦೭೫ ರಾಸುಗಳು ಗುಣಮುಖ ಹೊಂದಿವೆ. ೩೯೯ ಸಕ್ರಿಯ ಪ್ರಕರಣಗಳಿವೆ. ಆದರೆ ಈವರೆಗೆ ಯಾವುದೇ ರಾಸುಗಳು ಮೃತಪಟ್ಟಿಲ್ಲ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಟಿ.ಕೃಷ್ಣಪ್ಪ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss