Friday, July 1, 2022

Latest Posts

ನಗರ ವ್ಯಾಪ್ತಿಯ ವಸತಿ ರಹಿತರಿಗೆ 1001 ಮನೆ ನಿರ್ಮಾಣ : ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ನಗರ ವ್ಯಾಪ್ತಿಯ ವಸತಿರಹಿತ ಫಲಾನುಭವಿಗಳಿಗೆ ಜಿ+2 ಮಾದರಿಯಲ್ಲಿ 1001 ಮನೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಆಶ್ರಯ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಸರ್ವರಿಗೂ ಸೂರು ಯೋಜನೆಯಲ್ಲಿ ಅರ್ಜಿ ಆಹ್ವಾನಿಸಿದ್ದು, 14 ಸಾವಿರ ಅರ್ಜಿ ಬಂದಿವೆ. ಇದೀಗ ಮೇಗಳಹಳ್ಳಿ ಬಳಿಯಲ್ಲಿ ಜಿ+2 ಮಾದರಿಯಲ್ಲಿ 1001 ಮನೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ ಎಂದರು.
ಈಗಾಗಲೇ 300 ಜನ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಲಾಗಿದ್ದು, ಉಳಿದಿರುವ ಕಡು ಬಡವರಿಗೆ ಮನೆ ನೀಡಲು ಎಲ್ಲಾ ರೀತಿಯ ಮಾಹಿತಿ ಪಡೆಯಲಾಗುತ್ತಿದೆ. ಜಿ+2 ಮಾದರಿಯಲ್ಲಿ 1001 ಮನೆಗಳ ನಿರ್ಮಾಣಕ್ಕೆ 1500 ಮನೆಗಳ ಪಟ್ಟಿಯನ್ನು ಕಳುಹಿಸಿಕೊಡುವಂತೆ ಆರ್‌ಜಿಎಚ್‌ಸಿಎಲ್ ಸೂಚನೆ ನೀಡಿದೆ. ಅದರಂತೆಯೇ ಅರ್ಹ ಫಲಾನುಭವಿಗಳ ಪಟ್ಟಿ ಕಳಿಸಿಕೊಡಲಾಗುವುದು ಎಂದರು.
ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ಕಾರಿಜಮೀನು ಸಿಗುವುದು ಅತ್ಯಂತ ತುಂಬಾ ವಿರಳವಾಗಿದೆ. ಆದರೂ ಸಹ ತಹಸೀಲ್ದಾರ ಜೊತೆ ಚರ್ಚೆ ನಡೆಸಿ ಹಲವು ಪ್ರಯತ್ನಗಳ ನಂತರ ಮದಕರಿಪುರ ಪಕ್ಕದಲ್ಲಿ 12 ಎಕರೆ ಜಮೀನು ದೊರೆತಿದ್ದು, ಅದರಲ್ಲಿ 8.50 ಎಕರೆ ನಗರ ಆಶ್ರಯದ ಸುಪರ್ದಿಗೆ ಪಡೆದುಕೊಂಡು ಉಳಿದ 3.50 ಎಕರೆ ಮದಕರಿಪುರ ಗ್ರಾ.ಪಂ. ವ್ಯಾಪ್ತಿಗೆ ನೀಡಲಾಗಿದೆ ಎಂದು ಹೇಳಿದರು.
ಈಗಾಗಲೇ ನಗರಸಭೆ ಸಿಬ್ಬಂದಿ ಮದಕರಿಪುರ ಬಳಿಯ ಜಮೀನನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದು, ಅದರಂತೆಯೇ ಮದಕರಿಪುರ ಗ್ರಾ.ಪಂ.ಯಲ್ಲಿ ಪಹಣಿ ಲಭ್ಯವಾಗಿದೆ. ಇದರಿಂದ ಹೆಚ್ಚುವರಿಯಾಗಿ ಸುಮಾರು 400 ಮನೆಗಳನ್ನು ನಿರ್ಮಿಸಬಹುದಾಗಿದೆ. ಇದೊಂದು ಬೃಹತ್ ಕಾರ್ಯಕ್ರಮವಾಗಿದ್ದು, ಶೀಘ್ರದಲ್ಲಿ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಲಾಗುವುದು ಎಂದರು.
ಎಂ.ಕೆ.ಹಟ್ಟಿ ಬಳಿ ಸುಮಾರು 80 ಎಕರೆ ಸರ್ಕಾರಿ ಜಮೀನಿದೆ. ಅದರಲ್ಲಿ 30-40 ವರ್ಷಗಳ ಹಿಂದೆ ಸ್ವಲ್ಪ ಭಾಗ ಅರಣ್ಯ ಇಲಾಖೆಯಲ್ಲಿದೆ. ಕೆಲವು ಖಾಸಗಿಯವರು ಸಹ 5-10 ಎಕರೆ ಪಡೆದಿದ್ದಾರೆ ಎನ್ನಲಾಗಿದೆ. ತಹಸೀಲ್ದಾರ್, ಅರಣ್ಯ ಇಲಾಖೆ, ಗ್ರಾ.ಪಂ. ಜೊತೆ ಸಭೆ ನಡೆಸಿ ಉಳಿದಿರುವ ಜಮೀನನ್ನು ಎಂ.ಕೆ.ಹಟ್ಟಿ, ಸೀಬಾರ, ಗುತ್ತಿನಾಡು, ಮಾರಘಟ್ಟ ಗ್ರಾ.ಪಂ. ವಸತಿ ರಹಿತರಿಗೆ ಬಳಸಲಾಗುವುದು. ಉಳಿದ ಅರ್ಧಭಾಗ ನಗರ ಆಶ್ರಯಕ್ಕೆ ಪಡೆದುಕೊಳ್ಳಲಾಗುವುದು ಎಂದರು.
ಜಿ.ಆರ್.ಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ 20 ಎಕರೆ ಜಮೀನು ಸಿಕ್ಕಿದೆ. ಇದರಲ್ಲಿ 10 ಎಕರೆ ನಗರಕ್ಕೆ ಮತ್ತು 10 ಎಕರೆ ಜೆ.ಆರ್.ಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ನೀಡಲಾಗುವುದು. ಶೀಘ್ರದಲ್ಲಿ ವಸತಿ ಸಚಿವರು ಮತ್ತು ಮುಖ್ಯಮಂತ್ರಿ ಜೊತೆ ಚರ್ಚಿಸಿ ವಸತಿ ಸಮಸ್ಯೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು. ಇದರಿಂದ ವಸತಿ ಸಮಸ್ಯೆ ಸಂಪೂರ್ಣ ಬಗೆಹರಿಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಸದಸ್ಯ ವೆಂಕಟೇಶ್, ಉಪವಿಭಾಗಾಧಿಕಾರಿ ನಾಗರಾಜ್, ತಹಸೀಲ್ದಾರ್ ವೆಂಕಟೇಶಯ್ಯ, ಪೌರಯುಕ್ತ ಜೆ.ಟಿ.ಹನುಮಂತರಾಜು ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss