ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರು ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ನಿನ್ನೆ ಅಷ್ಟೇ ಹಿಂದಿ ಕಿರುತೆರೆ ನಟ ಸಮೀರ್ ಶರ್ಮಾ ಆತ್ಮಹತ್ಯೆ ಸುದ್ದಿ ಹೊರಬಿದ್ದಿತ್ತು. ಇದೀಗ ಅದರ ಬೆನ್ನಲ್ಲೇ ಬೋಜ್ಪುರಿ ನಟಿ ಅನುಪಮಾ ಪಾಠಕ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಸಾಯುವುದಕ್ಕೂ ಮುನ್ನ ಅವರು ಫೇಸ್ ಬುಕ್ ನಲ್ಲಿ ಲೈವ್ ಬಂದಿದ್ದರು. ೧೦ ನಿಮಿಷಗಳ ಕಾಲ ಲೈವ್ನಲ್ಲಿ ಮಾತನಾಡಿದ್ದ ಅನುಪಮಾ, ಯಾರನ್ನೂ ನಂಬಬೇಡಿ ಎಂದು ಜನರಿಗೆ ಬುದ್ಧಿ ಹೇಳಿದ್ದರು. ಆದರೆ ಅವರು ಇಂಥ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
ನಿಮಗೆ ತುಂಬ ಸಮಸ್ಯೆ ಆಗಿದ್ದು, ನೀವು ಆತ್ಮಹತ್ಯೆ ಮಾಡಿಕೊಳ್ಳಲಿದ್ದೀರಿ ಎಂದು ನಿಮ್ಮ ಆಪ್ತ ಸ್ನೇಹಿತರಿಗೆ ಹೇಳಿದರೂ ಸಹ ಅವರು ನಿಮ್ಮಿಂದ ದೂರ ಉಳಿಯುತ್ತಾರೆ. ಯಾಕೆಂದರೆ ನೀವು ಸತ್ತ ಬಳಿಕ ಅವರು ತೊಂದರೆಯಲ್ಲಿ ಸಿಲುಕಿಕೊಳ್ಳಲು ಇಷ್ಟಪಡುವುದಿಲ್ಲ. ನಿಮ್ಮ ಬಗ್ಗೆ ಎಲ್ಲರ ಎದುರು ಹೇಳಿ ಅವಮಾನ ಮಾಡುತ್ತಾರೆ. ಹಾಗಾಗಿ ಯಾರ ಜೊತೆಗೂ ನಿಮ್ಮ ಕಷ್ಟ ಹೇಳಿಕೊಳ್ಳಬೇಡಿ. ಯಾರನ್ನೂ ಸ್ನೇಹಿತರು ಎಂದುಕೊಳ್ಳಬೇಡಿ’ ಎಂದು ಫೇಸ್ ಬುಕ್ ಲೈವ್ನಲ್ಲಿ ಅನುಪಮಾ ಮಾತನಾಡಿದ್ದರು.
ನೀವು ಎಲ್ಲರ ನಂಬಿಕೆಗೂ ಅರ್ಹರಾದ ವ್ಯಕ್ತಿ ಆಗಿರಿ. ಆದರೆ ಯಾರನ್ನೂ ನಂಬಬೇಡಿ. ನಾನು ಇದನ್ನು ಜೀವನದಲ್ಲಿ ಕಲಿತಿದ್ದೇನೆ. ಜನರು ತುಂಬ ಸ್ವಾರ್ಥಿಗಳು. ಬೇರೆಯವರ ಕಾಳಜಿ ಅವರಿಗೆ ಇಲ್ಲ’ ಎಂದು ಹೇಳಿದ್ದ ಅನುಪಮಾ, ಸೂಸೈಡ್ ನೋಟ್ ಕೂಡ ಬರೆದಿಟ್ಟಿದ್ದಾರೆ. ಅದರಲ್ಲಿ ಮನೀಶ್ ಝಾ ಎಂಬ ವ್ಯಕ್ತಿಯ ಹೆಸರು ಪ್ರಸ್ತಾಪಿಸಿದ್ದಾರೆ. ತಮ್ಮ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದ ಆತ ನಂತರ ವಾಪಸ್ ಕೊಟ್ಟಿಲ್ಲ ಎಂಬುದನ್ನು ಸೂಸೈಡ್ ನೋಟ್ನಲ್ಲಿ ಬರೆದಿದ್ದಾರೆ.