Thursday, June 30, 2022

Latest Posts

ನಡಿಗೆ, ಯೋಗ, ಚ್ಯವನಪ್ರಾಶ್ ಸೇವನೆ: ಕೋವಿಡ್-19 ಗುಣಮುಖಿಗಳಿಗೆ ಸೂಚನೆ

ಹೊಸದಿಲ್ಲಿ: ಕೋವಿಡ್-೧೯ರಿಂದ ಚೇತರಿಸಿಕೊಂಡವರಿಗೆ ಸರಕಾರ ಭಾನುವಾರ ಹೊಸ ಮಾರ್ಗಸೂಚಿಗಳನ್ನು ನೀಡಿದ್ದು, ಇದರಂತೆ, ಬೆಳಗಿನ ನಡಿಗೆ, ಚ್ಯವನಪ್ರಾಶ್ ಸೇವನೆ ಮತ್ತು ಯೋಗವನ್ನು ದಿನಚರಿಯನ್ನಾಗಿಸುವುದು ಇದರಲ್ಲಿ ಸೇರಿದೆ.ಕೆಲವು ಕೋವಿಡ್-೧೯ಗುಣಮುಖಿಗಳು ಮತ್ತೆ ಕೊರೋನೋತ್ತರ ಉಪಚಾರಕ್ಕಾಗಿ ಆಸ್ಪತ್ರೆ ಸೇರುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಇಂತಹ ಸಲಹೆಗಳನ್ನು ನೀಡಿರುವುದು ಮಹತ್ವ ಪಡೆದಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು , ಕೊರೋನೋತ್ತರ ಕೇರ್ ಮತ್ತು ಕೋವಿಡ್‌ನಿಂದ ಚೇತರಿಸಿಕೊಂಡ ರೋಗಿಗಳ ಒಳಿತಿಗಾಗಿ “ಕೋವಿಡೋತ್ತರ ನಿರ್ವಹಣಾ ಶಿಷ್ಟಾಚಾರ”ಪಟ್ಟಿಯಲ್ಲಿ ವ್ಯಕ್ತಿಗಳು, ಸಮಾಜಕ್ಕಾಗಿ ಆರೋಗ್ಯಕಾಳಜಿ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದೆ.
ಕೋವಿಡ್‌ನಿಂದ ಚೇತರಿಸಿಕೊಂಡ ಅನೇಕ ರೋಗಿಗಳು ಬಳಿಕವೂ ಆಯಾಸ, ಮೈ ಕೈ ನೋವು, ಕೆಮ್ಮು, ಗಂಟಲು ಕೆರೆತ, ಉಸಿರಾಟದ ಸಮಸ್ಯೆಯಂತಹ ಲಕ್ಷಣಗಳನ್ನು ಹೊಂದಿರುವ ಪ್ರಕರಣಗಳು ವರದಿಯಾಗುತ್ತಿರುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ ಗಮನಿಸಿದೆ.ಇದಕ್ಕಾಗಿಯೇ ಈ ಮೇಲಿನ ಮೂರು ಅಂಶಗಳಲ್ಲದೆ, ಮಾಸ್ಕ್ ಧರಿಸುವಿಕೆ, ಕೈ ಮತ್ತು ಉಸಿರಾಟದ ನೈರ್ಮಲ್ಯ, ದೈಹಿಕ ಅಂತಹ ಕಾಯ್ದುಕೊಳ್ಳುವಿಕೆಯಂತಹ ನಡವಳಿಕೆಗಳನ್ನು ಮುಂದುವರಿಸುವಂತೆಯೂ ಸೂಚಿಸಲಾಗಿದೆ.
ಹಾಗೆಯೇ ಬಿಸಿ ನೀರು ಸೇವನೆ, ರೋಗನಿರೋಧಕ ಶಕ್ತಿವರ್ಧಕಗಳನ್ನು ಆಯುಷ್ ತಜ್ಞರ ಮಾರ್ಗದರ್ಶನದಂತೆ ಸೇವಿಸುವುದು, ದೇಹಾರೋಗ್ಯ ಸಹಕರಿಸಿದರೆ ಮನೆಗೆಲಸಗಳನ್ನು ಮಾಡುವುದು, ವೃತ್ತಿಪರ ಕೆಲಸಗಳನ್ನು ಹಂತಹಂತವಾಗಿ ಮಾಡುವಂತೆ ಅದು ಸೂಚಿಸಿದೆ.ಇದಕ್ಕಾಗಿ ಚ್ಯವನಪ್ರಾಶ್, ಆಯುಷ್ ಕ್ವಾಥ್, ಅರಶಿನ ಮಿಶ್ರಿತ ಹಾಲು, ಸಂಶಮಣಿವಾಟಿ, ಅಮೃತಬಳ್ಳಿ, ಅಶ್ವಗಂಧ, ಆಮ್ಲಫ್ರುಟ್ ಬಳಕೆ, ಅರಶಿನ ಮತ್ತು ಉಪ್ಪು ನೀರಿನಿಂದ ಬಾಯಿಮುಕ್ಕಳಿಸುವಿಕೆ ಇತ್ಯಾದಿಗಳ ಅನುಸರಣೆ ಕೋವಿಡೋತ್ತರದಲ್ಲಿ ರೋಗಿಗಳನ್ನು ಆರೋಗ್ಯವಂತರನ್ನಾಗಿಸಲಿದೆ. ಹಾಗೆಯೇ ಆರೋಗ್ಯ ತಜ್ಞರ ಮಾರ್ಗದರ್ಶನದಂತೆ ಥೆರಪಿ ಕೂಡಾ ನೆರವಾಗಬಹುದು ಎಂದು ಅದು ಹೇಳಿದೆ.
ಸಾಕಷ್ಟು ಬಿಸಿ, ತಾಜಾ ಆಹಾರ, ಸಾಕಷ್ಟು ವಿಶ್ರಾಂತಿ, ನಿದ್ರೆ ಅಗತ್ಯ.ಬೇರೆ ಕಾಯಿಲೆಗಳಿದ್ದರೆ ವೈದ್ಯರಿಂದ ಸೂಕ್ತ ಮಾರ್ಗದರ್ಶನ, ಔಷಧೋಪಚಾರಕ್ಕೂ ಗಮನ ಹರಿಸುವಂತೆ ಅದು ಸೂಚಿಸಿದೆ.
ವೈದ್ಯರು ಅನುಮತಿ ನೀಡಿದರೆ, ರೋಗಿಗಳು ಮನೆಯಲ್ಲೇ ತಾಪಮಾನ, ಬಿಪಿ, ರಕ್ತದಲ್ಲಿ ಸಕ್ಕರೆಯ ಅಂಶ, ರಕ್ತದಲ್ಲಿ ಆಮ್ಲಜನಕ ಪ್ರಮಾಣ ಇತ್ಯಾದಿಗಳನ್ನು ಪರಿಶೀಲಿಸುವ ವ್ಯವಸ್ಥೆ ಮಾಡಿಕೊಳ್ಳಬಹುದು.ಹಾಗೆಯೇ ಜ್ವರ, ಶೀತ, ಕೆಮ್ಮು, ಉಸಿರಾಟದ ಸಮಸ್ಯೆ ಬಂದಲ್ಲಿ ವೈದ್ಯರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು, ತಾನು ಸೇವಿಸಿದ ಔಷಧಗಳ ವಿವರವನ್ನು ವೈದ್ಯರಿಗೆ ನೀಡಬೇಕು, ಕೋವಿಡ್ ಚಿಕಿತ್ಸೆ ಪಡೆದು ೭ದಿನಗಳಲ್ಲಿ ಮತ್ತೆ ವೈದ್ಯರನ್ನು ಭೇಟಿಯಾಗುವಂತೆ ಅದು ಸೂಚಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss