Saturday, July 2, 2022

Latest Posts

ನಡು ನೀರಿನಲ್ಲಿ ಕೈ ಬಿಟ್ಟ ಪತಿ… ಅತಂತ್ರವಾಯಿತು ‘ಆಸಿಯಾ’ ಅಲಿಯಾಸ್ ಶಾಂತಿ ಜೂಬಿ ಬದುಕು…

ಹೊಸ ದಿಗಂತ ವರದಿ, ಮಂಗಳೂರು:

ಎಲ್ಲೆಡೆ ಲವ್ ಜಿಹಾದ್ ಕೂಗು ಕೇಳಿ ಬರುತ್ತಿರುವ ನಡುವೆಯೇ ಮತ್ತೊಂದು ಘಟನೆಗೆ ಕರಾವಳಿಯಲ್ಲಿ ನಡೆದಿದೆ. ಫೇಸ್‌ಬುಕ್ ಪ್ರೇಮ ಮದುವೆಯಲ್ಲಿ ಅಂತ್ಯ ಕಂಡರೂ ಮೂರೇ ವರ್ಷದಲ್ಲಿ ಮನದನ್ನೆಯನ್ನು ನಡು ನೀರಿನಲ್ಲಿ ಕೈ ಬಿಟ್ಟಿದ್ದಾನೆ ಪತಿರಾಯ!
ಸುಳ್ಯ ತಾಲೂಕಿನ ಗಾಂಧಿನಗರದ ಇಬ್ರಾಹಿಂ ಖಲೀಲ್ ಕಟ್ಟೆಮಾರ್ ಫೇಸ್‌ಬುಕ್ ಮೂಲಕ ಕೇರಳ ಕಣ್ಣೂರಿನ ಪ್ರತಿಷ್ಠಿತ ಮನೆತನದ ಶಾಂತಿ ಜೂಬಿ ಎಂಬಾಕೆಯನ್ನು 2017ರ ಜುಲೈ 12ರಂದು ವಿವಾಹವಾಗಿದ್ದ. ಮನೆ ಮಂದಿಯನ್ನು ಬಿಟ್ಟು ಬಂದ ಶಾಂತಿ ಜೂಬಿ ಇಸ್ಲಾಂ ಕಾನೂನಿನಂತೆ ಮದುವೆ(ನಿಖಾಹ್) ಆಗಿದ್ದು, ಈಗ ಅತಂತ್ರಳಾಗಿದ್ದಾಳೆ. ಇಬ್ರಾಹಿಂ ಖಲೀಲ್ ಕಟ್ಟೆಮಾರ್ ತನ್ನನ್ನು ದೂರಮಾಡುತ್ತಿರುವ ಬಗ್ಗೆ ಆಸಿಯಾ ಆಗಿ ಬದಲಾಗಿರುವ ಶಾಂತಿ ಜೂಬಿ ಬುಧವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತನ್ನ ಕರುಣಾಜನಕ ಕಥೆಯನ್ನು ಮಾಧ್ಯಮದ ಮುಂದೆ ವಿವರಿಸಿದ್ದಾರೆ.
ತಾನು ಕೇರಳ ಕಣ್ಣೂರಿನ ಪ್ರಸಿದ್ಧ ತೀಯಾ ಕುಟುಂಬದವಳಾಗಿದ್ದು, 2017ರ ಜುಲೈ 12ರಂದು ಸುಳ್ಯ ಗಾಂಧಿನಗರ ನಿವಾಸಿ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಎಂಬವರೊಂದಿಗೆ ಮದುವೆಯಾಗಿತ್ತು. ಆದರೆ ಈಗ ಇಬ್ರಾಹಿಂರವರ ಅಣ್ಣ ಶಿಹಾಬ್ ಮತ್ತು ಅವರ ಮನೆಯವರು ನನ್ನನ್ನು ಪತಿಯಿಂದ ದೂರ ಮಾಡುತ್ತಿದ್ದಾರೆ. ಪತಿಯೂ ನನ್ನನ್ನು ಅಲಕ್ಷ್ಯಿಸುತ್ತಿದ್ದಾರೆ ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದಾರೆ.
ಇಬ್ರಾಹಿಂ ಖಲೀಲ್ ಕಟ್ಟೆಮಾರ್ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದು, ಬಳಿಕ ನಾವಿಬ್ಬರು ಮದುವೆ ನಿರ್ಧಾರಕ್ಕೆ ಬಂದಿದ್ದೆವು. ಮದುವೆಯಾದ ಮೇಲೆ ಹೆಸರು ಬದಲಾವಣೆಯೊಂದಿಗೆ ನಾನೂ ಸಂಪೂರ್ಣ ಇಸ್ಲಾಂ ದರ್ಮವನ್ನು ಪಾಲಿಸುತ್ತಿದ್ದೆ. ನಮಾಜ್ ಕೂಡ ಮಾಡುತ್ತಿದ್ದೆ. ಆದರೆ ಮನೆಯವರ ಒತ್ತಡಕ್ಕೆ ಮಣಿದು ತನ್ನ ಪತಿ ಇಬ್ರಾಹಿಂ ಖಲೀಲ್ ಈಗ ತನ್ನನ್ನು ದೂರ ಮಾಡುತ್ತಿದ್ದಾರೆ. ಇದರಿಂದ ತಾನು ಬೀದಿಗೆ ಬರುವಂತಾಗಿದೆ. ಪೊಲೀಸ್ ಠಾಣೆ, ಸುಳ್ಯ ಗಾಂಧಿನಗರ ಮಸೀದಿಗೆ ಹೋದರೂ ತನಗೆ ನ್ಯಾಯ ಸಿಕ್ಕಿಲ್ಲ. ಎಲ್ಲರೂ ತನ್ನನ್ನು ಅವಮಾನಿಸುತ್ತಿದ್ದಾರೆ ಎಂದರು.
ಇಬ್ರಾಹಿಂ ಖಲೀಲ್ ಅವರ ಅಣ್ಣ ಶಿಹಾಬ್ ತನಗೆ ಅಶ್ಲೀಲ ಮೆಸೇಜ್ ಸಂದೇಶಗಳನ್ನೂ ಕಳುಹಿಸಿ ಹಿಂಸೆ ನೀಡಿದ್ದರು. 2 ಹೋಂಡಾ ಆಕ್ಟಿವಾ ಸೇರಿದಂತೆ 25 ಲಕ್ಷಕ್ಕಿಂತಲೂ ಅಧಿಕ ಹಣ ನನ್ನಿಂದ ಶಿಹಾಬ್ ಪಡೆದಿದ್ದಾರೆ. ಸಾಕಷ್ಟು ನೋವು ಸಹಿಸಿಕೊಂಡು ಬಂದೆ ಆದರೆ ಈಗ ಮಾನಸಿಕ ಹಿಂಸೆ ಹೆಚ್ಚಾಗಿದೆ. ನನ್ನ ಪತಿ ನನಗೆ ಬೇಕು… ನನಗೆ ನ್ಯಾಯಬೇಕು ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss