ಹೊಸದಿಗಂತ ವರದಿ, ಮೈಸೂರು:
ರಾಜಕಾರಣಿಗಳಾದಂತಹವರು ಯಾವುದಕ್ಕೂ ಟೀಕೆಗೆ, ತೆಗಳಿಕೆಗೆ ಹೆದರಬೇಡಿ ಎಂಬುದನ್ನು ಶರಣೆ ಅಕ್ಕಮಹಾದೇವಿ ಕಳೆದ 800 ವರ್ಷಗಳ ಹಿಂದೆಯೇ ಹೇಳಿದ್ದಾರೆ. ನನ್ನಂತಹವರಿಗೆ ಕೂಡ ಅಧಿಕಾರದ ಆಸೆ, ಭ್ರಮೆ ಇರಬಾರದು ಎಂದು ಅಕ್ಕಮಹಾದೇವಿ ಹೇಳಿದ್ದಾರೆ.
ನನಗೂ ಶಾಸಕನಾಗಬೇಕು, ಮಂತ್ರಿಯಾಗಬೇಕೆoಬ ಭ್ರಮೆಯಿಲ್ಲ. ಇದಕ್ಕೆ ಅಕ್ಕಮಹಾದೇವಿ ಅವರ ಸಂದೇಶ ವಿಚಾರಧಾರೆಗಳು ಕಾರಣವಾಗಿವೆ ಎಂದು ಮೈಸೂರಿನ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ರಾಮದಾಸ್ ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.
ಶನಿವಾರ ಮೈಸೂರಿನ ಜೆ.ಪಿ.ನಗರದಲ್ಲಿ 11 ಅಡಿ ಎತ್ತರ ಅಕ್ಕಮಹಾದೇವಿ ಪ್ರತಿಮೆ ಉದ್ಘಾಟನೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಿ ಮಾತನಾಡಿದರು.
ಬಸವಣ್ಣನ ವಚನದಂತೆ ಇವನಾರವ ಇವನಾರವ ಎನ್ನದೇ ನನ್ನನ್ನೂ ಒಳಗೊಂಡoತೆ ಇವ ನಮ್ಮವ ಇವ ನಮ್ಮವ ಎಂದು ಭಾವಿಸಿ. ಈ ಮೂಲಕ ನನ್ನನ್ನ ನಿಮ್ಮವನೆಂದು ಭಾವಿಸಿ, ನನಗೆ ಯಾವ ಭ್ರಮೆಯೂ ಇಲ್ಲ, ಯಾವ ಆಸೆ ಕನಸುಗಳೂ ಇಲ್ಲ. ಮಂತ್ರಿ ಆಗುವ ಆಸೆಯಿಲ್ಲ ಎಂದು ಸಿಎಂ ಎದುರೇ ವಚನದ ಮೂಲಕ ಟಾಂಗ್ ಕೊಟ್ಟರು.
ವಿಶ್ವ ಕಂಡ ದಾರ್ಶನಿಕ ಮಹನೀಯರಲ್ಲಿ ಅಕ್ಕಮಹಾದೇವಿ ಒಬ್ಬರು. ಅವರಂತೆ ಸಿಎಂ ಕೂಡ ನಡೆದು ಬಂದಿದ್ದಾರೆ. ಅಕ್ಕ ಮಹಾದೇವಿಯ ಊರಾದ ಶಿಕಾರಿಪುರದಿಂದಲೇ ಬಿ.ಎಸ್.ವೈ ಸಿಎಂ ಆಗಿದ್ದಾರೆ. ಅದನ್ನು ಡಿಜಿಟಲ್ ಲೈಬ್ರರಿ ಮಾಡಿ, ಅಕ್ಕನ ವಚನಗಳನ್ನು ಪ್ರಚಾರ ಮಾಡಿ, ಟೂರಿಸ್ಟ್ ಕೇಂದ್ರವಾಗಿ ಪರಿವರ್ತಿಸಲು ತೀರ್ಮಾನ ಮಾಡಲಾಗಿದೆ ಎಂದರು.