Sunday, August 14, 2022

Latest Posts

ನನಗೆ ಯಡಿಯೂರಪ್ಪನವರ ಮೇಲೆ ನಂಬಿಕೆ ಇದೆ: ಶಾಸಕ ಮುನಿರತ್ನ

ಹೊಸ ದಿಗಂತ ವರದಿ, ದಾವಣಗೆರೆ:

ಸಚಿವ ಸ್ಥಾನ ವಿಚಾರ ಸದ್ಯಕ್ಕೆ ಮುಗಿದ ಅಧ್ಯಾಯವಾಗಿದ್ದು, ಅದರ ಬಗ್ಗೆ ಈಗ ಚರ್ಚೆ ಬೇಡ. ಅದಕ್ಕೂ ಕಾಲ ಕೂಡಿ ಬರುತ್ತದೆ ಎಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲದಕ್ಕೂ ದೈವಕೃಪೆ ಬೇಕು. ಅಂತಹ ಕೃಪೆ ಬಂದೇ ಬರುತ್ತದೆ. ಯಾವಾಗ ಕಾಲ ಕೂಡಿ ಬರುತ್ತದೋ ನೋಡೋಣ. ನನಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಕಾರಣ ಏನೂ ಇಲ್ಲ. ಆದರೂ, ಯಾಕೆ ಸಚಿವ ಸ್ಥಾನದ ವಿಚಾರದಲ್ಲಿ ನನ್ನನ್ನು ಕೈಬಿಟ್ಟರೋ ಗೊತ್ತಿಲ್ಲ. ಸಮಯ ಬಂದಾಗ ಎಲ್ಲವೂ ಸರಿ ಹೋಗುತ್ತದೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಭರವಸೆ ನೀಡಿದ್ದಾರೆ. ನನಗೆ ಯಡಿಯೂರಪ್ಪನವರ ಮೇಲೆ ನಂಬಿಕೆ ಇದೆ. ಅನಿವಾರ್ಯ ಕಾರಣಗಳಿಂದ ಈಗ ಸಚಿವ ಸ್ಥಾನ ಕೈ ತಪ್ಪಿರಬಹುದು. ಅಧಿಕಾರ ಸಿಗಲಿಲ್ಲವೆಂದು ಆರೋಪ-ಪ್ರತ್ಯಾರೋಪ ಮಾಡುವವನು ನಾನಲ್ಲ. ಬಿಜೆಪಿ ವರಿಷ್ಠರು ಹಾಗೂ ಮುಖ್ಯಮಂತ್ರಿ ನನಗೆ ಸಚಿವ ಸ್ಥಾನ ನೀಡಲು ಬದ್ಧರಿದ್ದಾರೆ. ಸದ್ಯ ನನ್ನ ರಾಜರಾಜೇಶ್ವರಿ ಕ್ಷೇತ್ರದ ಮತದಾರರ ಋಣ ತೀರಿಸಲು ಗಮನ ಹರಿಸುತ್ತೇನೆ. ಪಕ್ಷ ಸಂಘಟನೆ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ನಾನು ತಲೆ ಕೆಡಿಸಿಕೊಳ್ಳುತ್ತೇನೆ ಎಂದು ಅವರು ನುಡಿದರು.
ಕೈಯಲ್ಲಿ ಸಿಡಿ ಇದ್ದರೆ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಸಿಡಿ ಇದೆ ಎಂದೆಲ್ಲಾ ಗೊಂದಲ ಮಾಡುವುದು ಬೇಡ. ಸುಳ್ಳು ಆರೋಪ, ಆಧಾರ ರಹಿತ ಆರೋಪ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅವರು ಇದೇ ವೇಳೆ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಸಿಡಿ ಆರೋಪಕ್ಕೆ ಪ್ರತಿಕ್ರಿಯಿಸಿದರು.
ರಾಜಕೀಯವಾಗಿ ಮಾತನಾಡಬೇಕೆಂಬ ಕಾರಣಕ್ಕೆ ಸಿದ್ದರಾಮಯ್ಯ ಮಾತನಾಡಲೇಬೇಕು. ಈ ರೀತಿಯೆಲ್ಲಾ ಮಾತನಾಡಿದರೆ ರಾಜಕೀಯದಲ್ಲಿದ್ದಾರೆಂದೇ ಅರ್ಥ. ಆದರೆ, ಯಾರೇ ಆಗಿದ್ದರೂ ಆಧಾರವನ್ನು ಇಟ್ಟುಕೊಂಡು ಮಾತನಾಡಬೇಕಾಗುತ್ತದೆ. ಬರೀ ಊಹಾಪೋಹಗಳ ಮಾತನಾಡುವುದು ಸರಿಯಲ್ಲ. ರಾಜ್ಯದಲ್ಲಿ ಸುಭದ್ರ ಸರ್ಕಾರ ಇರುತ್ತದೆಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ವತಃ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯಾಗಲ್ಲ. ಬಿ.ಎಸ್.ಯಡಿಯೂರಪ್ಪನವರೇ ಮುಂದಿನ ಎರಡೂವರೆ ವರ್ಷವೂ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss