ಮೈಸೂರು: ನಾನು ಯಾವುದೇ ಅಧಿಕಾರಿಗಳ ವರ್ಗಾವಣೆಯ ದಂಧೆಯನ್ನು ಮಾಡಿಲ್ಲ, ವಿಚಾರವಾಗಿ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಮಾಡಿರುವ ಆರೋಪಗಳೆಲ್ಲವೂ ನಿರಾಧಾರವಾಗಿದೆ ಎಂದು ಸಹಕಾರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಸರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ದುಡ್ಡು ಕೊಟ್ಟರು, ಯಾರು ದುಡ್ಡು ತಗೊಂಡಿದ್ದಾರೆ ಎಂಬುದೆಲ್ಲವೂ ಅವರಿಗೆ ಗೊತ್ತಿರುತ್ತೆ. ಆದರೆ ಆ ದಂಧೆ ಬಗ್ಗೆ ನನಗೆ ಮಾಹಿತಿ ಇಲ್ಲ ನನಗೆ ಯಾವುದೇ ವರ್ಗಾವಣೆ ಬಗ್ಗೆ ಗೊತ್ತಿಲ್ಲ. ನನ್ನ ಬಳಿ ಬಂದು ಯಾರೂ ಕೂಡ ವರ್ಗಾವಣೆ ಮಾಡಿಸಿಕೊಡಿ ಎಂದು ಕೇಳಿಕೊಂಡಿಲ್ಲ, ನನ್ನ ಗಮನಕ್ಕೆ ಬಾರದೆ ಯಾವುದೇ ವರ್ಗಾವಣೆಯೂ ಆಗಿಲ್ಲ. ಅಬಕಾರಿ ಇಲಾಖೆ ಅಧಿಕಾರಿ ವರ್ಗಾವಣೆ ನನಗೆ ಗೊತ್ತಿದ್ದೇ ಆಗಿದೆ. ಈ ಹಿಂದೆ ಅವರ ಮೇಲೆ ಭ್ರಷ್ಟಾಚಾರದ ಆರೋಪ ಇತ್ತು. ಆದರೆ, ಈ ವಿಚಾರದಲ್ಲಿ ದಂಧೆ ಎಂಬುದಿಲ್ಲ. ಈ ಪದವೇ ನನ್ನ ಜಯಮಾನದಲ್ಲಿ ಇಲ್ಲ, ದಂಧೆ ಯಾರು ಮಾಡಿದ್ದಾರೋ ಅವರಿಗೆ ಗೊತ್ತಿರುತ್ತೆ ಎಂದು ಸಾ.ರಾ.ಮಹೇಶ್ ಆರೋಪಕ್ಕೆ ತಿರುಗೇಟು ನೀಡಿದರು.
ಮಾಜಿ ಸಚಿವ ಹೆಚ್.ವಿಶ್ವನಾಥ್ ಆಗಲಿ, ಮತ್ತೊಬ್ಬರಾಗಲಿ ಬಂದು ವರ್ಗಾವಣೆ ಮಾಡಿಸಿ ಕೊಡಿ ಎಂದು ಈವರೆಗೂ ಕೇಳಿಲ್ಲ. ಅವರು ಎಂಎಲ್ಸಿ ಆಗಬೇಕು. ಅದಕ್ಕೆ ದೇವಸ್ಥಾನ ಸುತ್ತುತ್ತಿದ್ದಾರೆ. ಈ ವೇಳೆ ಅವರನ್ಯಾಕೆ ಮಧ್ಯೆ ಎಳೆದು ತರುತ್ತೀರಿ ಎಂದು ಸಾ.ರಾ.ಮಹೇಶ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತಹ ಕೆಲಸ ಮಾಡುತ್ತಿದ್ದೇನೆ. ಅದನ್ನು ಹೊರತುಪಡಿಸಿದ್ರೆ, ವರ್ಗಾವಣೆ ಆರೋಪಳೆಲ್ಲವೂ ಶುದ್ಧ ಸುಳ್ಳು, ಯಾರೂ ಕೂಡ ನಮ್ಮ ಜಿಲ್ಲಾಡಳಿತ ವ್ಯವಸ್ಥೆಗೆ ಮೂಗು ತೂರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಸಹಕಾರ ಬ್ಯಾಂಕ್ಗಳ ಚುನಾವಣೆ ಮುಂದೂಡಿಕೆ : ಜಿಲ್ಲಾ ಸಹಕಾರ ಬ್ಯಾಂಕ್ಗಳ ಚುನಾವಣೆಯನ್ನು ಆರು ತಿಂಗಳ ಕಾಲ ಮುಂದೂಡಲಾಗಿದೆ. ಮಳೆ ಬಂದಿದೆ, ರೈತರಿಗೆ ತೊಂದರೆಯಾಗಬಾರದು, ಕೃಷಿ ಸಾಲ ವಿತರಿಸಬೇಕು, ಇದಕ್ಕೆ ಚುನಾವಣೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಚುನಾವಣೆಯನ್ನೇ ಮುಂದೂಡಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.