Monday, August 15, 2022

Latest Posts

ನನಸಾಗುತ್ತಿದೆ ಬಹುದಿನದ ಕನಸು: ದೀಪಾವಳಿ ಬೆನ್ನಲ್ಲೇ ಕಾರವಾರ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಸಿಎಂ

ಕಾರವಾರ: ದೀಪಾವಳಿಯ ನಂತರದಲ್ಲಿ‌ ಕಾರವಾರ ಮೆಡಿಕಲ್ ಕಾಲೇಜಿನ ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ.
ಇದರಿಂದಾಗಿ ಬಹುದಿನದ ಸುಸಜ್ಜಿತ ಆಸ್ಪತ್ರೆ ಕನಸು ನನಸಾಗುವ ಸಂದರ್ಭ ಈಗ ಒದಗಿ ಬಂದಿದೆ.
ಈ ಕುರಿತಾಗಿ ಶಾಸಕಿ ರೂಪಾಲಿ ಎಸ್.ನಾಯ್ಕ ಅವರು ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗೃಹ ಕಚೇರಿ ಕಾವೇರಿಯಲ್ಲಿ ಭೇಟಿ ಮಾಡಿ, ಕಾರವಾರ ಮೆಡಿಕಲ್ ಕಾಲೇಜಿನ ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಆಗಮಿಸುವಂತೆ ಆಹ್ವಾನ ನೀಡಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ದೀಪಾವಳಿ ಹಬ್ಬದ ತರುವಾಯ ಕಾರವಾರಕ್ಕೆ ಆಗಮಿಸಿ ೪೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಶಿಲಾನ್ಯಾಸ ನೆರವೇರಿಸುವುದಾಗಿ ಭರವಸೆ ನೀಡಿದರು.
ಮೆಡಿಕಲ್ ಕಾಲೇಜಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕಿ ರೂಪಾಲಿ ಅವರು ಈ ಹಿಂದೆ ವಿನಂತಿಸಿದಾಗ ಯಡಿಯುರಪ್ಪ ಅವರು ೧೬೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದರು. ಈ ಬಗ್ಗೆಯೂ ಶಾಸಕರು ಧನ್ಯವಾದಗಳನ್ನುಸಲ್ಲಿಸಿದರು.
ನಂತರ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಕಾರವಾರ ನಗರಸಭೆ ಹಾಗೂ ಅಂಕೋಲಾ ಪುರಸಭೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು.
ಬಹುದಿನದ ಕನಸು
ಕಾರವಾರಕ್ಕೊಂದು ಸುಸಜ್ಜಿತ ಆಸ್ಪತ್ರೆ ಬೇಕೆನ್ನುವುದು ಬಹು ದಿನದ ಕನಸಾಗಿದೆ. ಕಾರವಾರ ಸೇರಿ ಕರಾವಳಿಯ ಜನ ಅನಾರೋಗ್ಯದ ಸಂದರ್ಭದಲ್ಲಿ ಗೋವಾ ಅಥವಾ ಮಣಿಪಾಲ, ಮಂಗಳೂರು ಆಶ್ರಯಿಸಬೇಕಾದ ಸ್ಥಿತಿ ಇದೆ. ಹೀಗಾಗಿ ಕಾರವಾರ ಆಸ್ಪತ್ರೆಗಾಗಿ ಶಾಸಕಿ ರೂಪಾಲಿ ನಾಯ್ಕ ಪ್ರಯತ್ನ ನಡೆಸಿ ಅನುದಾನ ಮಂಜೂರು ಮಾಡಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss