ಹೊಸ ದಿಗಂತ ವರದಿ, ದಾವಣಗೆರೆ
ಮಂತ್ರಿ ಮಾಡಲಿಲ್ಲ ಅಂತಾ 10-12 ಶಾಸಕರು ಆರೋಪ ಮಾಡುತ್ತಿದ್ದು, ನನ್ನ ಇತಿಮಿತಿಯಲ್ಲಿ ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಿದ್ದೇನೆ. ಅಸಮಾಧಾನವೇನಾದರೂ ಇದ್ದರೆ ಕೇಂದ್ರ ನಾಯಕರಿಗೆ ದೂರು ನೀಡಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅತೃಪ್ತ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ನಗರದ ಜಿಎಂಐಟಿ ಹೆಲಿಪ್ಯಾಡ್ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಇತಿಮಿತಿಯಲ್ಲಿ ಏನೆಲ್ಲಾ ಸಾಧ್ಯವೋ ಅಷ್ಟನ್ನು ಮಾಡಿದ್ದೇನೆ. ಯಶಸ್ವಿಯಾಗಿ ಮಂತ್ರಿ ಮಂಡಲ ವಿಸ್ತರಣೆ ಮಾಡಿದ್ದೇವೆ. ಕೇಂದ್ರದ ನಾಯಕರ ಅಪೇಕ್ಷೆಯಂತೆ ಒಂದು ಸಚಿವ
ಸ್ಥಾನವನ್ನು ಖಾಲಿ ಇಟ್ಟುಕೊಂಡಿದ್ದೇನೆ. ಮಂತ್ರಿ ಮಾಡಿಲ್ಲವೆಂದು ಆರೋಪ ಮಾಡುತ್ತಿರುವ ಶಾಸಕರಿಗೆ ನಾನು ಮನವಿ ಮಾಡುತ್ತೇನೆ. ನಿಮ್ಮ ಆರೋಪಗಳು ಏನೇ ಇದ್ದರೂ ಪಕ್ಷದ ಕೇಂದ್ರ ನಾಯಕರಿಗೆ ದೂರು ನೀಡಲು ನೀವು ಸ್ವತಂತ್ರರು ಎಂದು ಅವರು ಸಲಹೆ ನೀಡಿದರು.
ಸಿಕ್ಕಸಿಕ್ಕಲ್ಲಿ ಹೇಳಿಕೆಗಳನ್ನು ಕೊಡುವುದರಿಂದ ಗೊಂದಲ ಉಂಟು ಮಾಡಿ, ವಾತಾವರಣ ಕೆಡಿಸುವುದು ಪಕ್ಷದ ಶಿಸ್ತಿಗೆ ಧಕ್ಕೆ ತರುವ ಕೆಲಸವಾಗುತ್ತದೆ. ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಬಿಟ್ಟು, ನನ್ನ ಬಳಿ ಬಂದು ಚರ್ಚೆ ಮಾಡಿ. ಗೊಂದಲ ಸೃಷ್ಟಿಸುವ ಹೇಳಿಕೆ ನೀಡುವುದು ಬೇಡ. ಸಿಡಿ ವಿಚಾರ ಸೇರಿದಂತೆ ಯಾವುದೇ ವಿಷಯವಿದ್ದರೂ ಯಾರಿಗೂ ಹೆದರುವ ಅಗತ್ಯವೂ ಇಲ್ಲ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ರೆಬೆಲ್ ಶಾಸಕರಿಗೆ ಸಿಎಂ ಯಡಿಯೂರಪ್ಪ ಸೂಚ್ಯವಾಗಿ ಎಚ್ಚರಿಕೆ ಸಂದೇಶ
ರವಾನಿಸಿದರು.
ಕೇಂದ್ರದ ನಾಯಕರೇ ಹೇಳಿದಂತೆ ಇನ್ನೂ ಎರಡೂವರೆ ವರ್ಷ ಆಡಳಿತ ನಡೆಯುತ್ತದೆ. ಕೇಂದ್ರ ನಾಯಕರ ಆಶೀರ್ವಾದದಿಂದ ಉತ್ತಮ ಆಡಳಿತ ಮಾಡುತ್ತೇವೆ. ಇನ್ನು ಮುಂದೆ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುತ್ತೇನೆ. ವಿಧಾನ ಮಂಡಲದ ಅಧಿವೇಶನವನ್ನು ಇದೇ ತಿಂಗಳ ಕಡೇ ವಾರದಲ್ಲಿ ನಡೆಸಲಾಗುವುದು. ಮಾರ್ಚ್ ತಿಂಗಳಲ್ಲಿ ಬಜೆಟ್ ಅಧಿವೇಶನ ಮಾಡುತ್ತೇವೆ. ಹಣಕಾಸಿನ ಇತಿಮಿತಿಯಲ್ಲಿ ರೈತರ ಪರವಾದ ಬಜೆಟ್ನ್ನೇ ಮಂಡಿಸುತ್ತೇನೆ ಎಂದು ಅವರು ತಿಳಿಸಿದರು.