ಹೊಸ ದಿಗಂತ ವರದಿ, ಮಂಡ್ಯ :
ನನ್ನ ಬಗ್ಗೆ ಕೆಲವರಿಗೆ ಭಯವಿರಬೇಕು ಅಂತ ಕಾಣಿಸುತ್ತೆ. ಅದಕ್ಕೆ ಯಾವಾಗಲೂ ಅವರಿಗೆ ನನ್ನ ಬಗ್ಗೆ ಕನವರಿಸುತ್ತಿರುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮನ್ನು ಟೀಕಿಸುವವರಿಗೆ ನಯವಾಗಿಯೇ ತಿರುಗೇಟು ನೀಡಿದರು.
ವಿಶ್ವನಾಥ್ ಒಬ್ಬ ಸೀರಿಯಸ್ ಪೊಲಿಟೀಷಿಯನ್ ಅಲ್ಲ. ಆತನ ಮಾತುಗಳಿಗೆ ನಾನು ಪದೇ ಪದೇ ಉತ್ತರ ಕೊಡೋಲ್ಲ. ಅವರಿಗೆ ನನ್ನ ಬಗ್ಗೆ ಭಯವಿರಬೇಕು. ಅದಕ್ಕೆ ಹಾಗಾಗ ಕನವರಿಸುತ್ತಿರುತ್ತಾರೆ ಎಂದು ಕುಟುಕಿದರು.
ರಾಜ್ಯಾದ್ಯಂತ ಕಾಂಗ್ರೆಸ್ ಸಮಾವೇಶ ಮಾಡುತ್ತೇವೆ. ನಾನು ಎಲ್ಲಿಯೂ ಅಹಿಂದ ಸಮಾವೇಶ ಮಾಡೋದಾಗಿ ಹೇಳಿಲ್ಲ. ಕಾಂಗ್ರೆಸ್ ಮತ್ತು ನಾನು ಅಹಿಂದ ಪರ ಇದ್ದೇವೆ. ಅಹಿಂದ ವರ್ಗದವರಿಗೆ ನ್ಯಾಯ ಸಿಗಬೇಕು ಎನ್ನುವವನು ನಾನು. ಕಾಂಗ್ರೆಸ್ ಪಕ್ಷವೇ ಅಹಿಂದ ಪರ ಇದೆ. ಹಾಗಾಗಿ ಸಮಾವೇಶದ ಅಗತ್ಯವಿಲ್ಲ ಎಂದರು.
ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗುವ ಬಗ್ಗೆ ಕೇಳಿದಾಗ, ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ಆನಂತರ ಶಾಸಕರು ತೀರ್ಮಾನ ಮಾಡುತ್ತಾರೆ. ಬಳಿಕ ಹೈಕಮಾಂಡ್ ಮುದ್ರೆ ಒತ್ತುತ್ತೆ. ಇದು ಪಕ್ಷಗಳ ಪ್ರಕ್ರಿಯೆ ಎಂದು ಹೇಳಿದರು.
ರಾಜ್ಯ ಬಜೆಟ್ ಬಗ್ಗೆ ಯಾವ ನಿರೀಕ್ಷೆಯೂ ಇಲ್ಲ. ಏಕೆಂದರೆ, ಖಜಾನೆಯಲ್ಲಿ ದುಡ್ಡಿಲ್ಲ, ಖಾಲಿಯಾಗಿದೆ. 35 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಸಾಲ, ಬಡ್ಡಿ, ಚಕ್ರಬಡ್ಡಿ ಮನ್ನಾ ಮಾಡೋದೇ ಆಗುತ್ತೆ. ಇನ್ನೇನು ಉತ್ತಮ ಯೋಜನೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.