ಹೊಸ ದಿಗಂತ ವರದಿ, ಕೋಲಾರ:
ನಬಾರ್ಡ್ನ ಇ-ಶಕ್ತಿ ಯೋಜನೆಯಡಿ ಅವಿಭಜಿತ ಜಿಲ್ಲೆಯ 7300 ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆಗಳನ್ನು ಆನ್ಲೈನ್ ವ್ಯಾಪ್ತಿಗೆ ತರಲು 243 ಮಂದಿ ಪ್ರೇರಕರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಬಾರ್ಡ್,ಅಫೆಕ್ಸ್ ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಇ-ಶಕ್ತಿ ಯೋಜನೆ ಅನುಷ್ಟಾನದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯರಿಗೆ ಸಾಲ ದೇಶದಲ್ಲೇ ಪ್ರಥಮ
ದೇಶದಲ್ಲೇ ಅತಿ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ ಖ್ಯಾತಿಗೆ ಡಿಸಿಸಿ ಬ್ಯಾಂಕ್ ಒಳಗಾಗಿದೆ, ಈ ಹಿನ್ನಲೆಯಲ್ಲಿ ಇ-ಶಕ್ತಿ ವ್ಯಾಪ್ತಿಗೆ ಸಂಘಗಳ ಕಾರ್ಯಚಟುವಟಿಕೆಗಳನ್ನು ತರುವ ಪ್ರಾಯೋಗಿಕ ಪ್ರಯತ್ನಕ್ಕಾಗಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಮೊದಲ ಹಂತದಲ್ಲಿ 7300 ಮಹಿಳಾ ಸಂಘಗಳನ್ನು ಇ-ಶಕ್ತಿ ವ್ಯಾಪ್ತಿಗೆ ತರಲಿದ್ದು, ೭೩ ಸಾವಿರ ಮಂದಿ ತಾಯಂದಿರು ಈ ಸಂಘಗಳ ಸದಸ್ಯರಾಗಿದ್ದಾರೆ ಎಂದ ಅವರು, ಮೊದಲ ಹಂತವನ್ನು ಮಾರ್ಚ್ ಅಂತ್ಯದೊಳಗೆ ಮುಗಿಸಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಕಾಯಕ ಯೋಜನೆ
10 ಲಕ್ಷ ಸಾಲ
ಮಹಿಳಾ ಸ್ವಸಹಾಯ ಸಂಘಗಳಿಗೆ ಕಾಯಕ ಯೋಜನೆಯಡಿ ಕ್ಯಾಂಡಲ್, ಊದುಬತ್ತಿ ತಯಾರಿಕೆ, ಟೈಲರಿಂಗ್ ಮತ್ತಿತರ ಸ್ವಯಂ ಉದ್ಯೋಗ ಕೈಗೊಳ್ಳಲು 10 ಲಕ್ಷದವರೆಗೂ ಸಾಲ ಸಿಗಲಿದೆ ಎಂದು ಗೋವಿಂದಗೌಡ ತಿಳಿಸಿದರು.
ಈ ಸಾಲ ಯೋಜನೆಗೆ ಅವಿಭಜಿತ ಜಿಲ್ಲೆಗೆ ನಬಾರ್ಡ್ ಹಾಗೂ ಅಫೆಕ್ಸ್ ಬ್ಯಾಂಕ್ ಪ್ರೇರಣೆಯಾಗಿ ನಿಂತಿವೆ ಎಂದ ಅವರು, ಇ-ಶಕ್ತಿ ಯೋಜನೆಗೆ ನಮ್ಮ ಬ್ಯಾಂಕನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.
ಮಹಿಳಾ ಶಕ್ತಿಯಾಗಿ ಇ-ಶಕ್ತಿ ಯೋಜನೆ
ಮಹಿಳಾ ಸ್ವಸಹಾಯ ಸಂಘಗಳ ಮಾಸಿಕ ಸಭೆ,ಸಾಲ ವಿತರಣೆ, ಸಾಲ ಮರುಪಾವತಿ, ಉಳಿತಾಯ ಸೇರಿದಂತೆ ಎಲ್ಲಾ ಚಟುವಟಿಕೆಗಳು ಆನ್ಲೈನ್ಗೆ ದಾಖಲಾಗಲಿದೆ, ಎಲ್ಲಾ ಸಂಘಗಳಿಗೂ ಯೂಸರ್ಐಡಿ ಹಾಗೂ ಪಾಸ್ವರ್ಡ್ ನೀಡುತ್ತಿದ್ದು, ೩೦ ಸಂಘಗಳಿಗೆ ಒಬ್ಬರಂತೆ ನೇಮಕಗೊಂಡ ಪ್ರೇರಕರು ಆನ್ಲೈನ್ಗೆ ಅಪ್ಲೋಡ್ ಮಾಡುವರು ಎಂದ ಅವರು, ಸಂಘಗಳ ಸಂಪೂರ್ಣ ಡಾಟಾ ಮಾಹಿತಿ ಡಿಸಿಸಿ ಬ್ಯಾಂಕ್ ಸಾಫ್ಟ್ವೇರ್ಗೆ ಹರಿದು ಬರುವುದರಿಂದ ಸಂಘಗಳ ಸದೃಢತೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಇ-ಶಕ್ತಿ ಯೋಜನೆಯಿಂದಾಗಿ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ಬರಲಿದೆ, ಯಾವುದೇ ಅವ್ಯವಹಾರಗಳಿಗೆ ಅವಕಾಶ ಇರುವುದಿಲ್ಲ, ಸದಸ್ಯರ ಹಣಕ್ಕೆ ಭದ್ರತೆ ಇರುತ್ತದೆ ಎಂದು ತಿಳಿಸಿದರು.
ಪ್ರೇರಕರಿಗೆ ತಿಂಗಳಿಗೆ 4200 ಗೌರವಧನ
ನಬಾರ್ಡ್ ಎಜಿಎಂ ನಟರಾಜನ್ ಮಾತನಾಡಿ, ಈಗಾಗಲೇ ಮಹಿಳಾ ಸ್ವಸಹಾಯ ಸಂಘಗಳ ಹೆಚ್ಚು ಶಿಕ್ಷಣ ಪಡೆದ ಬುದ್ದಿವಂತ ಹೆಣ್ಣು ಮಕ್ಕಳನ್ನೇ ಪ್ರೇರಕರಾಗಿ ಆಯ್ಕೆ ಮಾಡಿದ್ದು, 30 ಸಂಘಗಳಿಗೆ ಒಬ್ಬರಂತೆ ನೇಮಿಸಿಕೊಳ್ಳಲಾಗುತ್ತದೆ ಮತ್ತು ಅವರಿಗೆ ತಿಂಗಳಿಗೆ 4200 ರೂ ಸಂಭಾವನೆ ಸಿಗಲಿದೆ ಜತೆಗೆ 250 ರೂ ಮೊಬೈಲ್ ಬಳಕೆಗೆ ಹಣ ಸಿಗಲಿದೆ ಎಂದು ವಿವರಿಸಿದರು.
ಮಹಿಳಾ ಸಂಘಗಳಿಗೆ ಅತಿ ಹೆಚ್ಚು ಸಾಲ ನೀಡಿರುವುದು ಮಾತ್ರವಲ್ಲ, ವಸೂಲಾತಿಯಲ್ಲೂ ಅತ್ಯಂತ ಉತ್ತಮ ಸಾಧನೆ ಮಾಡಿರುವುದಕ್ಕಾಗಿ ಕೋಲಾರ ಡಿಸಿಸಿ ಬ್ಯಾಂಕನ್ನು ನಬಾರ್ಡ್ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದೆ, ಈಗ ಮೊದಲ ಹಂತವಾಗಿದ್ದು,ಮುಂದಿನ ದಿನಗಳಲ್ಲಿ ಎಲ್ಲಾ ಸಂಘಗಳನ್ನೂ ಇ-ಶಕ್ತಿ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಬ್ಯಾಂಕ್ ನಿರ್ದೇಶಕ ನಾಗಿರೆಡ್ಡಿ, ಅಫೆಕ್ಸ್ ಬ್ಯಾಂಕ್ ಸಿಜಿಎಂ ದಾಕ್ಷಾಯಿಣಿ,ಡಿಸಿಸಿ ಬ್ಯಾಂಕ್ ಎಂಡಿ ರವಿ, ಲೀಡ್ಬ್ಯಾಂಕ್ ಮ್ಯಾನೇಜರ್ ಶ್ರೀರಾಮಯ್ಯ, ಸಹಕಾರ ಸಂಘಗಳ ಉಪನಿಬಂಧಕ ಸಿದ್ದನಗೌಡ ನೀಲಪ್ಪನವರ್, ಎಜಿಎಂಗಳಾದ ಶಿವಕುಮಾರ್, ಖಲೀಮುಲ್ಲಾ, ಹುಸೇನ್ ದೊಡ್ಡಮನಿ ಮತ್ತಿತರರಿದ್ದರು.