Sunday, April 18, 2021

Latest Posts

ನಮ್ಮಿಬ್ಬರ ಉದ್ದ ಕಡಿಮೆ ಇರಬಹುದು ಆದರೆ ಪ್ರೀತಿ ತುಂಬಾನೇ ಎತ್ತರ!

ನಾವು ನೋಡೋಕೆ ಎಷ್ಟೇ ಚೆನ್ನಾಗಿದ್ದರೂ ನಮಗೆ ತೃಪ್ತಿ ಇಲ್ಲ. ಇನ್ನೊಂದ್ ಚೂರು ಕಲರ್ ಇರಬೇಕಿತ್ತು. ಇನ್ನೊಂದು ಚೂರು ಉದ್ದ ಇದ್ದಿದ್ರೆ ಸಕತ್ತಾಗಿರೋದು, ನಾನೊಂಚೂರು ಸಣ್ಣ ಆಗ್ಬಿಟ್ರೆ ಶಿಲ್ಪಾ ಶೆಟ್ಟಿ ಥರ ಕಾಣ್ತಿನಿ.. ಹೀಗೆ ಜೀವನದ ಕಡೆವರೆಗೂ ಒಂದಲ್ಲಾ ಒಂದು ಸಮಸ್ಯೆ ಇದ್ದಿದ್ದೆ!
ಆದರೆ ಕುಬ್ಜರ ಬಗ್ಗೆ ಆಲೋಚನೆ ಮಾಡಿದ್ದೀರಾ? ಅವರಿಗೂ ಎಲ್ಲರಂತೆ ರಾಜಕುಮಾರನನ್ನು ವರಿಸುವ ಆಸೆ.. ಆದರೆ ರಾಜಕುಮಾರ ಬರಬೇಕಲ್ಲ?
ರಾಣಿಯಂಥ ಹುಡುಗಿಯಿರುವಾಗ ರಾಜನಂಥ ಹುಡುಗ ಯಾಕೆ ಬರೋದಿಲ್ಲ.. ಬಂದೇ ಬರ‍್ತಾನೆ.. ಪಾಯಲ್ ಜೀವನದ ರಾಜಕುಮಾರ ಹೇಗೆ ಬಂದ? ಈ ಸ್ಟೋರಿ ನೋಡಿ..

‘ ನಮ್ಮಮ್ಮ ಯಾವಾಗಲೂ ಮದುವೆ ಬಗ್ಗೆ ಮಾತನಾಡಿದಾಗ ‘ನನ್ನನ್ನು ಯಾರ್ ಮದ್ವೆ ಆಗ್ತಾರೆ?’ಎಂದು ಹೇಳಿ ಸುಮ್ಮನಾಗುತ್ತಿದೆ. ಮದುವೆ ಆಲೋಚನೆಗೆ ನನ್ನ ತಲೆಯಲ್ಲಿ ಕಡೇ ಸ್ಥಾನ.. ಅಮ್ಮ ಮಾತ್ರ ‘ತಲೆಕೆಡಿಸಿಕೊಳ್ಳಬೇಡ ನಿನ್ನನ್ನು ಕರೆದುಕೊಂಡು ಹೋಗಲು ರಾಜಕುಮಾರನೇ ಬರುತ್ತಾರೆ’ ಎನ್ನುತ್ತಿದ್ದರು. ನಗುವ ವಿಷಯ ತಾನೆ, ನಕ್ಕು ಸುಮ್ಮನಾಗುತ್ತಿದ್ದೆ.

ಕಮ್ಯುನಿಟಿ ಮ್ಯಾಟ್ರಿಮೊನಿ: ಇದೇ ವೇಳೆ ನನ್ನ ಸಹೋದರ ನನಗೆ ಒಂದು ಆಪ್ ಬಗ್ಗೆ ತಿಳಿಸಿದ. ಬೇರೆಯವರಿಗೆ ಹೇಗೆ ಕಮ್ಯುನಿಟಿ ಮ್ಯಾಟ್ರಿಮೊನಿ ಇದೆಯೋ ಹಾಗೇ ವಿಶೇಷ ಚೇತನರಿಗಾಗಿಯೇ ಇರುವ ಮ್ಯಾಟ್ರಿಮೊನಿ ಸೈಟ್ ಅದು. ಇದನ್ನು ಡೌನ್‌ಲೋಡ್ ಮಾಡಿ ಕುತೂಹಲದಿಂದ ಕಾದೆ. ಇದರಲ್ಲಿಯೇ ನನಗೆ ಕಪಿಲ್ ಸಿಕ್ಕಿದ್ದು. ಕಪಿಲ್ ಕೂಡ ಡ್ವಾರ್ಫಿಸಂ ಅನುಭವಿಸುತ್ತಿದ್ದಾರೆ. ಆದರೆ ಅವರು ನನ್ನಂತೆ ಕೀಳಿರಿಮೆ ಹೊಂದಿಲ್ಲ. ಅವರು ಇಪ್ಪತ್ತು ಕೆ.ಜಿ ತೂಕ ಇಳಿಸಿದ ಬಗ್ಗೆ ನನ್ನನ್ನು ಮೋಟಿವೇಟ್ ಮಾಡಿದರು. ನನ್ನ ಮೇಲೆ ನನಗೆ ಹೊಸ ಪ್ರೀತಿ ಆರಂಭವಾಯಿತು.

ಇವನೇ ರಾಜಕುಮಾರ: ನಮ್ಮ ಸ್ನೇಹ ಹೀಗೆ ನಡೆಯುತ್ತಿತ್ತು. ಅವರು ಇಂದೋರ್‌ನಲ್ಲಿದ್ದರು. ನಾನು ರಾಜಸ್ಥಾನದಲ್ಲಿ. ಎಂದಿಗೂ ನಾವಿಬ್ಬರೂ ಮೀಟ್ ಮಾಡಲಿಲ್ಲ. ನನ್ನ ಕುಟುಂಬದವರಿಗೆ ಕಪಿಲ್ ತುಂಬಾನೇ ಇಷ್ಟ. ಅಮ್ಮನೊಂತೂ ‘ಇವನೇ ಕಣೆ ರಾಜಕುಮಾರ’ ಅನ್ನೋಕೆ ಶುರು ಮಾಡಿದ್ದರು. ನನಗೆ ರಶ್ ಮಾಡಲೂ ಇಷ್ಟವಿರಲಿಲ್ಲ. ಹಾಗಂತ ಏನನ್ನೂ ಕಳೆದುಕೊಳ್ಳಲೂ ಇಷ್ಟವಿರಲಿಲ್ಲ.

Will you marry me?: ಇದಾಗಿ ಒಂದು ವರ್ಷ ಕಳೆಯಿತು. ಒಂದು ವರ್ಷದ ಹಿಂದೆ ನಾನು ಇದ್ದ ರೀತಿಗೂ ಈಗಿರುವ ರೀತಿಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ. ಎಲ್ಲದಕ್ಕೂ ಕಪಿಲ್ ಕಾರಣ. ಅವರು ನನ್ನ ಜೀವನವನ್ನೇ ಬದಲಾಯಿಸಿದರು. ಹೀಗೆ ಒಂದು ದಿನ ಕಪಿಲ್ ನನಗೊಂದು ಪೋಟೊ ಕಳಿಸಿದರು. ಆ ಫೋಟೊದಲ್ಲಿ ನಮ್ಮ ಪಕ್ಕದ ಮನೆಯವರು ಅವರ ಮನೆಯಲ್ಲಿ ಇದ್ದರು. ಪಕ್ಕದ ಮನೆಯವರೇ ನನ್ನ ಅವನ ಮದುವೆ ಬಗ್ಗೆ ಮಾತನಾಡಿ ಬಂದಿದ್ದರು.
ಆಗ ಕಪಿಲ್ ‘Will you marry me’  ಎಂದು ಕೇಳಿದರು. ‘ಅವಸರ ಬೇಡ ನನಗೆ ನಿನ್ನನ್ನು ಕಂಡರೆ ಇಷ್ಟ. ನಿನಗೂ ಹಾಗೇ ಅನಿಸಿದರೆ ಮಾತನಾಡೋಣ’ ಎಂದರು.

ನಾನಲ್ಲೇ ಕರಗಿಹೋದೆ: ನಾನು ಹದಿನೈದು ದಿನದ ನಂತರ ಅಪ್ಪ-ಅಮ್ಮನ ಜೊತೆ ಇಂದೋರ್‌ಗೆ ಹೊರಟೆ. ಅಂದು ನಮ್ಮಿಬ್ಬರ ಮಾತುಕತೆ ಮುಗಿಸಿ, ಚಿಕ್ಕದಾಗಿ ಎಂಗೇಜ್‌ಮೆಂಟ್ ಮಾಡಿದರು. ಅದೇ ಮೊದಲು ನಾನು ಕಪಿಲ್‌ನನ್ನು ನೋಡಿದ್ದು. ಕಣ್ಣಂಚಿನಲ್ಲಿ ಪ್ರೀತಿ ಇಟ್ಟುಕೊಂಡು ನಗುತ್ತಾ ನನ್ನನ್ನು ನೋಡಿದಾಗ ನಾನಲ್ಲೇ ಕರಗಿಹೋದೆ. ಆ ಕ್ಷಣವೇ ಅನ್ನಿಸಿತು ನನ್ನ ನಿರ್ಧಾರ ಸರಿಯಾಗಿದೆ ಎಂದು.

ಮತ್ತೊಮ್ಮೆ ಪ್ರೀತಿಯಾಯ್ತು: ಸ್ವಲ್ಪ ದಿನದ ನಂತರ ಕಪಿಲ್ ರಾಜಸ್ಥಾನಕ್ಕೆ ಬಂದರು. ಆಗ ಅವರ ಮೇಲೆ ಮತ್ತೊಮ್ಮೆ ಪ್ರೀತಿಯಾಯ್ತು. ನನ್ನ ಬ್ಯಾಗ್ ಇಟ್ಟುಕೊಳ್ಳಲು ಸಹಾಯ ಮಾಡುತ್ತಿದ್ದರು. ನಿನ್ನ ಕೂದಲು ಯಾಕಿಷ್ಟು ಚೆನ್ನಾಗಿದೆ ಎಂದು ಪದೇ ಪದೆ ಹೇಳಿ ನನ್ನ ಕೆನ್ನೆ ಕೆಂಪಾಗಿಸುತ್ತಿದ್ದರು. ಇದಾದ 11 ತಿಂಗಳ ನಂತರ ನನ್ನ ಕಪಿಲ್ ಮದುವೆ . ಯಾವ ಮದುಮಗಳು ಎಕೈಟ್ ಆಗದಷ್ಟು ನಾನು ಎಕ್ಸೈಟ್ ಆಗಿದ್ದೆ. ನಾನು ಎಲ್ಲರಂತೆ ಇದ್ದೇನೆ ನನಗೇನು ಕಡಿಮೆಯಾಗಿದೆ ಎನಿಸಿತು. ನನ್ನನ್ನು ಜನ ನೋಡುತ್ತಿದ್ದಾರೆ ಎಂದು ತಲೆ ಕೆಡಿಸಿಕೊಳ್ಳದೆ ಮನಬಂದಂತೆ ಕುಣಿದೆ. ಅಂದು ನಾನು ನಾನಾಗಿರಲಿಲ್ಲ. ಹಸೆಮಣೆ ಏರಲು ನಡೆದುಬಂದ ನನ್ನನ್ನು ಕಪಿಲ್ ತಾಜ್ ಮಹಲ್ ನೋಡಿದಂತೆ ನೋಡಿದರು.. ಇನ್ನೇನೂ ಬೇಕಿರಲಿಲ್ಲ ಜೀವನಕ್ಕೆ!

ಪಿಜ್ಜಾಗೋಸ್ಕರವೇ ಜಗಳ: ನಮ್ಮ ಮದುವೆಯಾಗಿ ಮೂರು ತಿಂಗಳಾಯ್ತು. ಪ್ರತಿದಿನವೂ ನನ್ನಲ್ಲೇ ಹೊಸ ಬೆಳವಣಿಗೆ ಇದೆ. ಡ್ಯಾನ್ಸ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತೇನೆ. ಅಷ್ಟರ ಮಟ್ಟಿಗೆ ಆತ್ಮವಿಶ್ವಾಸ ಬಂದಿದೆ. ಕಪಿಲ್ ಅಡುಗೆ ಮಾಡುತ್ತಾರೆ. ಜಗಳ ಆಡಿದರೆ ಆ ದಿನ ರಾತ್ರಿ ಕಪಿಲ್ ಪಿಜ್ಜಾ ಮಾಡಿಕೊಡುತ್ತಾರೆ. ಪಿಜ್ಜಾಗೋಸ್ಕರವೇ ಕೆಲವೊಮ್ಮೆ ಜಗಳ ಆಡುತ್ತೇನೆ.

ನಮ್ಮಿಬ್ಬರ ಉದ್ದ ಕಡಿಮೆ ಇರಬಹುದು ಆದರೆ ಪ್ರೀತಿ ತುಂಬಾನೇ ಎತ್ತರ!

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss