Sunday, June 26, 2022

Latest Posts

ನಮ್ಮಿಷ್ಟದಂತೆ ಮೇಯಲು ಬಿಟ್ಟರೆ ನೀವು ಒಳ್ಳೆಯವರು, ಇಲ್ಲವಾದರೆ…

2016ರ ನವಂಬರ್ ನಂತರದ ಒಂದೆರಡು ಘಟನೆಗಳು: ನನ್ನ ಸ್ನೇಹಿತರಲ್ಲೊಬ್ಬರು ಬಹುತೇಕ ಎಲ್ಲಾ ಪಕ್ಷದ ಮುಖಂಡರೊಡನೆ ಸೌಹಾರ್ದಯುತ ಸಂಬಂಧವಿಟ್ಟು ಕೊಂಡು ಎಲ್ಲಾ ಜನರ ಕೆಲಸಗಳನ್ನು ಮಾಡಿಕೊಡುವ ಮದ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು. ಯಾವ ಪಕ್ಷದ ಸರ್ಕಾರವೇ ಬರಲಿ, ಅವರ ‘ಉದ್ಯೋಗ’ ನಿರಾತಂಕವಾಗಿ ಸಾಗುತ್ತಿತ್ತು. ಅವರು ನವಂಬರ್ 9ರ ಮುಂಜಾನೆ ಏಕಾಏಕಿ ಮೋದಿಯವರನ್ನು ನಿಂದಿಸಲಾರಂಭಿಸಿದರು. ಏನಾಯ್ತೆಂದು ಕೇಳಿದಾಗ, ನಾನು ನಿನ್ನೆ ತಾನೇ ‘ಇಷ್ಟು ಲಕ್ಷ’ ಹಣ ಬ್ಯಾಂಕಿನಿಂದ ತಂದು ಮನೆಯಲ್ಲಿ ಇಟ್ಟಿದ್ದೆ. ನಿನ್ನೆ ರಾತ್ರಿ 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯಗೊಳಿಸಿದ ಕಾರಣ ನನಗೆ ಅಷ್ಟೊಂದು ಹಣ ನಷ್ಟವಾಗಿದೆ ಎಂದೆಲ್ಲಾ ಬಡಬಡಿಸುತ್ತಿದ್ದರು. ಬ್ಯಾಂಕಿನಿಂದ ತಂದ ಹಣವಾದರೆ ಅದಕ್ಕೆ ದಾಖಲೆ ಇದೆಯಲ್ಲ, ಬದಲಾಯಿಸಿ ಕೊಡುವಂತೆ ಕೇಳಿದರಾಯ್ತು, ಅದಕ್ಕೇಕೆ ತಲೆ ಬಿಸಿ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ವಿಷಯ ಇಷ್ಟೇ: ಯಾವುದೋ ಒಂದು ‘ದೊಡ್ಡ ವ್ಯವಹಾರಕ್ಕೆ’ ಸಂಬಂಧಿಸಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ‘ಹಂಚಲು’ ಆ ಹಣವನ್ನು ತಂದಿರಿಸಲಾಗಿತ್ತು. (ಬ್ಯಾಂಕಿಂದಲ್ಲ) ರಾತ್ರಿ ಬೆಳಗಾಗುವಷ್ಟರಲ್ಲಿ ಅಷ್ಟೊಂದು ದೊಡ್ಡ ಮೊತ್ತ ರದ್ದುಗೊಂಡ ಕಾರಣಕ್ಕೆ ಇಂಗು ತಿಂದ ಮಂಗನಂತೆ ಕೈಕೈ ಹಿಸುಕಿಕೊಳ್ಳುವಂತಾಗಿತ್ತು. ಮೋದಿ ಕೆಟ್ಟವರಾಗಿಬಿಟ್ಟರು!

ಇವರ ಕಥೆ ಹೀಗಾದರೆ ಇತರ ಉದಾಹರಣೆಗಳು. ವೃತ್ತಿಯಲ್ಲಿ ವ್ಯಾಪಾರಿ, ಪ್ರವೃತ್ತಿಯಲ್ಲಿ ಕಲಾವಿದರಾಗಿದ್ದವರೊಬ್ಬರು ಏಕಾಏಕಿ ಮೋದಿಯವರನ್ನು ಟೀಕಿಸಲಾರಂಭಿಸಿದರು. ಇಂತಹ ಹಠಾತ್ ಬದಲಾವಣೆಗೆ ಕಾರಣವೇನು, ಅದು ನ್ಯಾಯಯುತವಾಗಿದ್ದರೆ ನೇರವಾಗಿ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿ ಬರೆದರೆ ಸಂಬಂಧಿಸಿದವರ ಗಮನಕ್ಕೆ ಬರುತ್ತದೆ ಹಾಗೂ ಸೂಕ್ತ ಕ್ರಮ ಕೈಗೊಳ್ಳಬಹುದಲ್ಲ ಎಂದರೆ ಉತ್ತರವಿಲ್ಲ. ಹಾಗಾದರೆ ಅವರ ವ್ಯವಹಾರ ನ್ಯಾಯಯುತವಲ್ಲ ಎಂದು ತಾನೇ ಅರ್ಥ? ನನ್ನ ಬಾಲ್ಯದ ಸ್ನೇಹಿತನೋರ್ವ ಬ್ಯಾಂಕೊಂದರ ಉನ್ನತ ಹುದ್ದೆಯಲ್ಲಿದ್ದರು. ನೋಟು ಅಮಾನ್ಯಗೊಳಿಸಿದ ಕೆಲವು ತಿಂಗಳ ಬಳಿಕ ಮೋದಿ ದ್ವೇಷಿಯಾಗಿ ಬದಲಾದರು. ಕಾರಣ ಹುಡುಕಿದರೆ ಈ ವ್ಯಕ್ತಿ ನೋಟು ಅಮಾನ್ಯದ ಸಂದರ್ಭದಲ್ಲಿ ಕಾಳಧನಿಕರ ಕಪ್ಪು ಹಣವನ್ನು ಹೊಸನೋಟುಗಳಿಗೆ ಬದಲಾವಣೆ ಮಾಡಿಕೊಟ್ಟ ಕಾರಣಕ್ಕೆ ಸಿಕ್ಕಿಬಿದ್ದಿದ್ದರಂತೆ. ಇಲ್ಲಿ ಪ್ರಶ್ನೆ ಇಷ್ಟೇ: ಈ ರೀತಿಯ ಮನೆಮುರುಕ ಪ್ರವೃತ್ತಿಯ ರಾಜಕಾರಣಿಗಳಿಂದಾಗಿಯೇ ನಮ್ಮ ದೇಶ ಇಂದು ಇಂತಹ ದುಸ್ಥಿತಿಗೆ ತಲುಪಿದೆ. ಇನ್ನಾದರೂ ಸ್ವಾರ್ಥ ಮರೆತು, ದೇಶದ ಬಗ್ಗೆ ಕಿಂಚಿತ್ತಾದರೂ ಯೋಚಿಸಬಾರದೆ?

ಇದಿಷ್ಟು ವ್ಯಕ್ತಿಗತ ಆದ್ಯತೆಯ ವಿಷಯಗಳು. ಇನ್ನು ಚುನಾವಣಾ ಫಲಿತಾಂಶ ಮತ್ತು ಅದನ್ನು ವಿಶ್ಲೇಷಿಸುವವರ ಮನಸ್ಥಿತಿ ಬಗ್ಗೆ ತುಸು ಗಮನ ಹರಿಸುವುದಾದರೆ, ಇತ್ತೀಚೆಗೆ ಕೆಲವೊಂದು ವಿಧಾನಸಭೆಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರಕ್ಕೆ ವಿರುದ್ಧ ಜನಾದೇಶ ಬರುತ್ತಿದ್ದು ಇದು ಭಾಜಪಕ್ಕೆ ಹಿನ್ನಡೆಯೆಂದು ವಿಶ್ಲೇಷಿಸಲಾಗುತ್ತಿದೆ. ಮೇಲ್ನೋಟಕ್ಕಿದು ಸರಿಯೆನ್ನಿಸಿದರೂ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಫಲಿತಾಂಶ ಬರುವುದನ್ನೂ ಇಲ್ಲಿ ಗಮನಿಸಬೇಕಾಗಿದೆ. ಸ್ಥಳೀಯ ಸಂಸ್ಥೆಗಳ ಫಲಿತಾಂಶ ಒಂದು ಪಕ್ಷದ ಪರವಾಗಿ ಬಂದರೆ, ವಿಧಾನಸಭೆಯಲ್ಲಿ ಇನ್ನೊಂದು ಪಕ್ಷಕ್ಕೆ, ಲೋಕಸಭೆಗೆ ಬೇರೊಂದು ಪಕ್ಷಕ್ಕೆ ಬಹುಮತ ನೀಡುವ ಜನರ ಆದೇಶ ತಪ್ಪು ಎನ್ನಲಾದೀತೇ? ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಕಾರಣಗಳೇನೇ ಇದ್ದರೂ ದೆಹಲಿ ಚುನಾವಣಾ ಫಲಿತಾಂಶಕ್ಕೂ ಕೇಂದ್ರ ಸರ್ಕಾರದ ಸಾಧನೆಗಳಿಗೂ ತಳಕು ಹಾಕುವುದು ಸರಿಯಲ್ಲ.

ದೆಹಲಿ ಫಲಿತಾಂಶ ‘ಉಚಿತಗಳ’ ಪರಿಣಾಮವೆಂದು ಒಂದು ವರ್ಗ ದೂರಿದರೆ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆಗೆ ಸಿಕ್ಕ ಅನುಮೋದನೆ ಎಂಬುದು ಇನ್ನೊಂದು ವರ್ಗದ ಅನಿಸಿಕೆ. ಮತದಾರರ ಅಸಡ್ಡೆ ಕಾರಣ ಎಂಬುದು ಒಬ್ಬರ ವಾದವಾದರೆ, ಸ್ಥಳೀಯ ನಾಯಕತ್ವದ ಕೊರತೆಯಿಂದ ಹೀಗಾಗಿದೆ ಎಂಬುದು ಇನ್ನೂ ಕೆಲವರ ವಾದ. ಅದೇನೇ ಇರಲಿ, ಯಾರನ್ನೇ ಆಗಲಿ ಕುರುಡಾಗಿ ಸಮರ್ಥಿಸುವ ಮನಸ್ಥಿತಿ ಒಳ್ಳೆಯದಲ್ಲ. ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರ ಹೇಳಿಕೆ ‘ನಿಮಗೆ ದೇಶ ಏನು ಕೊಟ್ಟಿದೆಯೆಂದು ಕೇಳುವ ಮೊದಲು, ನೀವು ದೇಶಕ್ಕೆ ಏನು ಕೊಟ್ಟಿದ್ದೀರೆಂದು” ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳುವ ಕಾಲ ಬಂದಿದೆ. ಆದರೆ ಅರ್ಹತೆ ಇಲ್ಲದಿದ್ದರೂ ಅಡ್ಡ ದಾರಿಯಲ್ಲಿ ಸರ್ಕಾರಿ ಸೌಲಭ್ಯಗಳಿಗೆ ಹಪಹಪಿಸುವವರಿಂದ ಏನು ತಾನೇ ನಿರೀಕ್ಷಿಸಬಹುದು?

ಇದೇ ವೇಳೆ ದೇಶದ ಆಂತರಿಕ ಚುನಾವಣೆಗಳೂ ಸೇರಿದಂತೆ ಯಾವುದೇ ಬೆಳವಣಿಗೆ, ನೀತಿ ನಿರ್ಧಾರಗಳ ಬಗ್ಗೆ ನೆರೆಯ ರಾಷ್ಟ್ರಗಳು, ಅಲ್ಲಿನ ಮಾಧ್ಯಮಗಳು ಪ್ರತಿಕ್ರಿಯಿಸುವ ಅಗತ್ಯ ಮತ್ತು ಅದರ ಹಿಂದಿನ ಉದ್ದೇಶಗಳ ಬಗ್ಗೆ ಸ್ವಲ್ಪ ಯೋಚಿಸಬೇಕಾಗಿದೆ. ನಾವೆಂದಾದರೂ, ನಮ್ಮ ನೆರೆಯ ರಾಷ್ಟ್ರದ ಚುನಾವಣೆಗಳ ಬಗ್ಗೆ ಮಾತನಾಡಿದ್ದಿದೆಯೇ? ಬೇರೆ ದೇಶದ ಸರ್ವೋಚ್ಚ ಅಧಿಕಾರ ಕೇಂದ್ರ, ಅಂದರೆ ಅಧ್ಯಕ್ಷ, ಪ್ರಧಾನಿ ಅಥವಾ ಆಳುವ ಪಕ್ಷದ ಸೋಲು-ಗೆಲುವಿನ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರಬಹುದು. ಏಕೆಂದರೆ ಅದು ಪ್ರಜಾತಾಂತ್ರಿಕ ಶಿಷ್ಟಾಚಾರ. ಆದರೆ ಒಂದು ರಾಜ್ಯದ, ಅಷ್ಟೇಕೆ ಕೆಲವೊಮ್ಮೆ ಸ್ಥಳೀಯ ಸಂಸ್ಥೆಯ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲಿ, ಫಲಿತಾಂಶದ ಬಗ್ಗೆ ನೆರೆಯ ದೇಶಗಳು ಮೂಗುತೂರಿಸುವುದು, ಅಲ್ಲಿನ ಮಾಧ್ಯಮಗಳು ಉತ್ಪ್ರೇಕ್ಷಿತ ವರದಿಗಳನ್ನು ಬಿತ್ತರಿಸುವುದು. ಅದನ್ನು ನಮ್ಮ ದೇಶದ ವಿಪಕ್ಷದ ರಾಜಕಾರಣಿಗಳು ವಿವಿಧ ವೇದಿಕೆಗಳಲ್ಲಿ ಉಲ್ಲೇಖಿಸುವುದು ಎಷ್ಟರಮಟ್ಟಿಗೆ ಸಮರ್ಥನೀಯ? ಇಂಥವರ ಕೈಗೆ ದೇಶದ ಆಡಳಿತದ ಚುಕ್ಕಾಣಿ ಕೊಟ್ಟರೆ ಏನಾದೀತು?

ಜಪಾನ್ ದೇಶವು ದಶಕಗಳ ಹಿಂದೆ ಅಮೇರಿಕಾದವರು ಹಿರೋಶಿಮಾ ನಾಗಸಾಕಿ ಮೇಲೆ ಹಾಕಿದ ಅಣುಬಾಂಬ್ ಮಾಡಿದ ಅನಾಹುತವನ್ನು ಇಂದಿಗೂ ಮರೆತಿಲ್ಲ. ನಾವಾದರೋ ಶತ್ರು ರಾಷ್ಟ್ರದ ಮೇಲಿನ ಸೈನಿಕ ಧಾಳಿಯ ಬಗ್ಗೆ ಸಾಕ್ಷಿ ಕೇಳುತ್ತೇವೆ. ಚೀನಾದ ಬಗ್ಗೆ ಯಾರೆಷ್ಟೇ ಟೀಕೆ ಮಾಡಿದರೂ, ಕೊರೋನಾ ವೈರಸ್ ಪೀಡಿತರ ಚಿಕಿತ್ಸೆಗೆ ಹತ್ತೇ ದಿನಗಳಲ್ಲಿ ಸಾವಿರ ಹಾಸಿಗೆಯ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿ ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಸೇವೆಗೆ ಸಜ್ಜಾದ ಸುದ್ದಿ ವರದಿಯಾಗಿದೆ. ಇದ್ಯಾವುದೂ ನಮಗೆ ಮಾದರಿಯಾಗುವುದಿಲ್ಲ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ತನ್ನ ದೇಶದ ವಿರುದ್ಧ ಹೇಳಿಕೆ ನೀಡಿದರೆಂಬ ಕಾರಣಕ್ಕೆ ಅಲ್ಲಿನ ನ್ಯಾಯಾಲಯ ಮರಣದಂಡನೆ ವಿಧಿಸುತ್ತದೆ. ಅಷ್ಟಕ್ಕೂ ಅವರು ಹೇಳಿರುವುದು, ಪಾಕಿಸ್ತಾನ ಉಗ್ರಗಾಮಿಗಳನ್ನು ಪೋಷಿಸುತ್ತಿದೆ ಎಂಬ ನಗ್ನ ಸತ್ಯವನ್ನು! ಅದೇ ದೆಹಲಿಯಲ್ಲಿ ಏಳು ವರ್ಷದ ಹಿಂದೆ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳಿಗೆ ಮರಣದಂಡನೆ ವಿಧಿಸಿದ್ದರೂ ಕಾನೂನಿನ ಸಣ್ಣಪುಟ್ಟ ಅವಕಾಶಗಳನ್ನೂ ದುರುಪಯೋಗ ಪಡಿಸಿಕೊಂಡು ಗಲ್ಲು ಶಿಕ್ಷೆಯನ್ನು ಮುಂದೂಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮಾತ್ರವಲ್ಲ ಆಕೆಯ ತಾಯಿಗೆ ನ್ಯಾಯಾಲಯದ ಆವರಣದಲ್ಲೇ, “ಯಾವುದೇ ಕಾರಣಕ್ಕೂ ಶಿಕ್ಷೆ ಜಾರಿಗೊಳಿಸಲು ಬಿಡುವುದಿಲ್ಲ” ಎಂದು ಅಣಕಿಸುವಷ್ಟು ಮುಂದುವರಿಯುತ್ತಾರೆ, ಅತ್ಯಾಚಾರಿಗಳ ಪರ ವಾದಿಸುತ್ತಿರುವ ನ್ಯಾಯವಾದಿ!

ಊಟ, ವಸತಿ, ವಿದ್ಯೆ, ಆರೋಗ್ಯ ಮತ್ತು ಉದ್ಯೋಗ ಇವು ಜನಸಾಮಾನ್ಯರ ಆದ್ಯತೆ. ಆದರೆ ಹಿಂದಿನ ಸರ್ಕಾರಗಳು ಮೊಣಕೈಗೆ ಜೇನು ಹಚ್ಚಿದರೂ ನಂಬಿದವರು, ಈಗ ದಿನ ಬೆಳಗಾಗುವಷ್ಟರಲ್ಲಿ ಪವಾಡ ನಿರೀಕ್ಷಿಸುತ್ತಾರೆ. ಯಾವುದೇ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಕಷ್ಟು ಸಮಯ ಬೇಕಾಗುತ್ತದೆ, ಕಟ್ಟಡ ನಿರ್ಮಾಣದಲ್ಲಿ ಅಡಿಪಾಯ ನಿರ್ಮಾಣ ಸಮರ್ಪಕವಾಗಿ ಇಲ್ಲದಿದ್ದರೆ ಭವಿಷ್ಯದಲ್ಲಿ ಅದು ನಿರರ್ಥಕವೆಂಬ ಮೂಲಭೂತ ವಿಚಾರಗಳನ್ನು ಅರ್ಥೈಸಿಕೊಳ್ಳುವಷ್ಟು ತಾಳ್ಮೆ ನಮಗಿಲ್ಲ.

ಇನ್ನು ಕೆಲವರು ತಮ್ಮ ಉದ್ಯೋಗದಾತರ ಧೋರಣೆಗೆ ವಿರುದ್ಧವಿದ್ದರೆ ಎಲ್ಲಿ ಕೆಲಸ ಕಳೆದುಕೊಳ್ಳಬೇಕಾಗುವುದೋ ಎಂಬ ಭಯದಿಂದ ವಸ್ತುಸ್ಥಿತಿಯನ್ನು ಅರ್ಥೈಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಇದಕ್ಕಿಂತಲೂ ಅಪಾಯಕಾರಿಯೆಂದರೆ ಮಾಧ್ಯಮಗಳು; ಅದರಲ್ಲೂ ವಿದೇಶಿ ಒಡೆತನದ/ಪಾಲುದಾರಿಕೆಯ ವಿದ್ಯುನ್ಮಾನ ಮಾಧ್ಯಮಗಳು. ತಮ್ಮ ಮಾಲೀಕರ ತಾಳಕ್ಕೆ ತಕ್ಕಂತೆ ವರ್ತಿಸಿ, ವಾಸ್ತವಾಂಶಗಳನ್ನು ಮರೆಮಾಚಿ ಉತ್ಪ್ರೇಕ್ಷಿತ ವರದಿಗಳನ್ನು ಬಿತ್ತರಿಸುತ್ತಿವೆ, ಇದು ಸಾಮಾನ್ಯ ಜನರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಇದನ್ನು ಪ್ರತಿಬಂಧಿಸುವಂತೆ ಕೋರಿ ಡಾ.ಸುಬ್ರಹ್ಮಣ್ಯ ಸ್ವಾಮಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿರುವುದಾಗಿ ವರದಿಯಾಗಿದೆ. ಇದು ನಿಜವಾದಲ್ಲಿ ಅದೊಂದು ಉತ್ತಮ ಬೆಳವಣಿಗೆಯೇ ಸರಿ.

ಕೊನೆಯದಾಗಿ ಒಂದು ಮಾತು: ಹಿಂದಿನ ಸರ್ಕಾರವೇ ಚೆನ್ನಾಗಿತ್ತು. ತಾವೂ ತಿನ್ನುತ್ತಿದ್ದರು, ಬೇರೆಯವರಿಗೂ ಒಂದಿಷ್ಟು ತಿನ್ನಲು ಬಿಡುತ್ತಿದ್ದರು. ಆದ್ದರಿಂದ ಅವರೇ ಒಳ್ಳೆಯವರು. ಹೀಗೆ ಯೋಚಿಸುವ ಮನಸ್ಥಿತಿಯಿಂದ ಹೊರಗೆ ಬರುವುದಾದರೂ ಯಾವಾಗ? ತಿನ್ನುವುದು, ತಿನ್ನಲು ಬಿಡುವುದು ಯಾರ ಹಣವನ್ನು? ನಮ್ಮದೇ ತೆರಿಗೆ ಹಣವೆಂದೇಕೆ ನಮಗೆ ಅರ್ಥವಾಗುವುದಿಲ್ಲ?

-ಮೋಹನದಾಸ ಕಿಣಿ, ಕಾಪು 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss