ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶಕ್ಕಾಗಿ ಇಡೀ ದೇಶವೇ ಎದುರು ನೋಡುತ್ತಿದ್ದು ನಮ್ಮ ಪಕ್ಷದ ಗೆಲುವಿನ ದಾರಿ ಸ್ಪಷ್ಟವಾಗಿದೆ. ಮತ ಎಣಿಕೆಯನ್ನು ನಿಲ್ಲಿಸಲು ಯಾರು, ಹೇಗೆ ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್ ಹೇಳಿದ್ದಾರೆ.
ಕಳೆದ 24 ಗಂಟೆಯಲ್ಲಿ ಏನೆಲ್ಲ ಬೆಳವಣಿಗೆಗಳಾಗಿವೆ ನೋಡಿ’ ಎಂದು ಮತ ಎಣಿಕೆ ನಡೆಯುತ್ತಿರುವ ಪ್ರಮುಖ ಐದು ರಾಜ್ಯಗಳ ಪೈಕಿ, ನಾಲ್ಕರಲ್ಲಿ ತಮ್ಮ ಪಕ್ಷ ಮುನ್ನಡೆ ಸಾಧಿಸಿರುವುದನ್ನು ಉಲ್ಲೇಖಿಸಿ ಬೈಡನ್ ಮಾತನಾಡಿದರು.
ಅಧ್ಯಕ್ಷೀಯ ಚುನಾವಣೆಯಲ್ಲಿ ನಾವು ವಿರೋಧ ಪಕ್ಷದವರು, ಪ್ರತಿಸ್ಪರ್ಧಿಗಳಾಗಿರಬಹುದು ಆದರೆ ನಾವು ಶತ್ರುಗಳಲ್ಲ, ನಾವು ಕೂಡ ಅಮೆರಿಕನ್ನರು ಎಂದು ಹೇಳಿದ್ದಾರೆ. ಇದುವರೆಗೆ ಬಂದ ಎಲೆಕ್ಟೊರಲ್ ಕಾಲೇಜ್ ಮತಗಳು ಸ್ಪಷ್ಟವಾಗಿ ಹೇಳುತ್ತದೆ, ನಾವು ಈ ಸ್ಪರ್ಧೆಯಲ್ಲಿ ಜಯಗಳಿಸುತ್ತೇವೆ, ಡೆಮಾಕ್ರಟ್ ಪಕ್ಷ 300ಕ್ಕೂ ಹೆಚ್ಚು ಎಲೆಕ್ಟೊರಲ್ ಮತಗಳನ್ನು ಗಳಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ಸದ್ಯ ಬೈಡನ್ 264 ಹಾಗೂ ಪ್ರತಿಸ್ಪರ್ಧಿ ಟ್ರಂಪ್ 213 ಸದಸ್ಯರ ಬೆಂಬಲ ಪಡೆದಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಐದು ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ಮುಂದುವರಿದಿದೆ.