ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ ಟಿಸಿ)ಯ ಎಂಪನೆಲ್ ನೌಕರರನ್ನು ನಷ್ಟದ ಕಾರಣದಿಂದ ವಜಾಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಆದರೆ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಮತ್ತು ಪಿಎಸ್ ಸಿ ಉದ್ಯೋಗದ ಮೂಲಕ ಬಂದವರನ್ನು ಮಾತ್ರ ಖಾಯಂಗೊಳಿಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದರು. ಕೆಎಸ್ಆರ್ ಟಿಸಿಯ ಪುನರುತ್ಥಾನಕ್ಕಾಗಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲಾಗುವುದು. ಪ್ರಸಕ್ತ ವರ್ಷದಲ್ಲಿ ಕೆಎಸ್ಆರ್ ಟಿಸಿಗೆ 2000 ಕೋಟಿ ರೂ. ಒದಗಿಸಲಾಗುವುದು. ಕಳೆದ ವರ್ಷ 1000 ಕೋಟಿ ರೂ. ನೀಡಲಾಗಿತ್ತು. ಎಡರಂಗ ಒಕ್ಕೂಟ ಸರಕಾರವು ಅಧಿಕಾರಕ್ಕೆ ಬಂದ ಬಳಿಕ 4160 ಕೋಟಿ ರೂ. ಗಳ ಯೋಜನೆಯನ್ನು ತಯಾರಿಸಲಾಗಿದೆ. ಆದರೆ ಐಕ್ಯರಂಗ ಒಕ್ಕೂಟದ ಆಳ್ವಿಕೆಯ ಐದು ವರ್ಷಗಳ ಅವಧಿಯಲ್ಲಿ ಕೆಎಸ್‍ಆರ್‍ಟಿಸಿಗೆ ನೀಡಲಾದ ಒಟ್ಟು ನೆರವು ಕೇವಲ 1220 ಕೋಟಿ ರೂ. ಮಾತ್ರ ಆಗಿತ್ತು. 2012 ರ ಬಳಿಕ ವೇತನ ಪರಿಷ್ಕರಣೆ ಜಾರಿಗೆ ಬಾರದ್ದರಿಂದ ಎಲ್ಲಾ ಖಾಯಂ ಉದ್ಯೋಗಿಗಳಿಗೂ ತಿಂಗಳಿಗೆ 1500 ರೂ. ಮಧ್ಯಂತರ ನೆರವು ನೀಡಲು ಸರಕಾರವು ಯೋಜನೆ ರೂಪಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೆಎಸ್ಆರ್ ಟಿಸಿಯ ಅಂಗಸಂಸ್ಥೆಯಾದ ಸಿಫ್ಟ್ ಸಂಸ್ಥೆಯಲ್ಲಿ ಉದ್ಯೋಗ ಖಾಯಂ ಆಗದ ನೌಕರರನ್ನು ಕೆಲಸದಲ್ಲಿ ಮುಂದುವರಿಸಲಾಗುವುದು.ಹೊಸ ಯೋಜನೆಯ ಅನ್ವಯ ಮುಂದಿನ ಮೂರು ವರ್ಷಗಳಲ್ಲಿ ಆದಾಯ ಮತ್ತು ವೆಚ್ಚದ ನಡುವಿನ ಅಂತರವನ್ನು 500 ಕೋಟಿ ರೂ.ಗೆ ಇಳಿಸುವ ಉದ್ದೇಶವನ್ನು ಕೆಎಸ್‍ಆರ್‍ಟಿಸಿ ಹೊಂದಿದೆ. ಕೆಎಸ್‍ಆರ್‍ಟಿಸಿ ಒದಗಿಸುವ ಉಚಿತ ಸೇವೆಗಳಿಗೆ ಪ್ರತಿಯಾಗಿ ರಾಜ್ಯ ಸರಕಾರವು ಈ ಮೊತ್ತವನ್ನು ನಿಗಮಕ್ಕೆ ಅನುದಾನವಾಗಿ ನೀಡುವುದನ್ನು ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ಇದೇ ಸಂದರ್ಭ ನುಡಿದರು.

LEAVE A REPLY

Please enter your comment!
Please enter your name here