ನಾಗಮಂಗಲ: ಟಿಪ್ಪರ್ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ ಮತ್ತೋರ್ವ ತೀವ್ರತರನಾದ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ತಾಲೂಕಿನ ಬೆಳ್ಳೂರು ಹೋಬಳಿಯ ಗರುಡನಹಳ್ಳಿ ಬಳಿ ನಡೆದಿದೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದ ಶಿವರಾಜು(32) ಮೃತ ದುರ್ದೈವಿ. ಮೃತ ವ್ಯಕ್ತಿ ತನ್ನ ತಂದೆಯೊಂದಿಗೆ ಬೈಕ್ನಲ್ಲಿ ಮಾಯಸಂದ್ರದಿಂದ ಯಡಿಯೂರು ಮಾರ್ಗವಾಗಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಬೈಕ್ ಸವಾರ ಶಿವರಾಜು ತಲೆಗೆ ತೀವ್ರಪೆಟ್ಟಾದ ಕಾರಣ ಸ್ಥಳದಲ್ಲಿಯೇ ಕೊನೆಯುಸಿರೆಳೆದರೆ, ಬೈಕ್ ಹಿಂಬದಿಯಲ್ಲಿದ್ದ ಮೃತನ ತಂದೆ ವೀರಭದ್ರಪ್ಪನಿಗೆ ತೀವ್ರವಾದ ಗಾಯಗಳಾಗಿದ್ದು ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೆಳ್ಳೂರು ಪಿಎಸ್ಸೈ ದಯಾನಂದ್ ಭೇಟಿ ನೀಡಿ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ.