Friday, August 12, 2022

Latest Posts

ನಾಗಮಂಗಲ| ಹುಂಡಿ ಹಣ ಕದ್ದ ಕಳ್ಳ ಅರ್ಚಕನ ಪತ್ತೆ ಹಚ್ಚಿದ ಬಸವ!

ನಾಗಮಂಗಲ: ಸಕ್ಕರೆ ನಾಡಿನಲ್ಲಿ ದೇವರ ಬಸವಪ್ಪಗಳಿಂದ ಮೇಲಿಂದ ಮೇಲೆ ಪವಾಡಗಳು ನಡೆಯುತ್ತಿರುವ ಬೆನ್ನಲ್ಲೆ ದೇವರ ಬಸವವೊಂದು ದೇವಸ್ಥಾನದ ಹುಂಡಿ ಹಣ ಕಳವು ಮಾಡಿದ್ದ ಕಳ್ಳ ಪೂಜಾರಿಯನ್ನು ಅಟ್ಟಾಡಿಸಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವಂತೆ ಮಾಡಿದ ಪ್ರಸಂಗ ತಾಲೂಕಿನ ಹೊಣಕೆರೆ ಹೋಬಳಿಯ ಜುಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ರಾಮನಗರ ಜಿಲ್ಲೆಯ ಜಯಪುರ ಗ್ರಾಮದ ತಾಯಿ ಚಾಮುಂಡೇಶ್ವರಿ ದೇವಿಯ ಮೊರೆ ಹೋಗಿದ್ದರು. ದೇವರ ಬಸವಪ್ಪ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಭಕ್ತಿಪೂರ್ವಕವಾಗಿ ಪೂಜಿಸಿ ಬರಮಾಡಿಕೊಂಡ ವ್ಯಕ್ತಿಯೊಬ್ಬರು ಸಮಸ್ಯೆಗೆ ಪರಿಹಾರ ಒದಗಿಸುವಂತೆ ಬಸಪ್ಪನಲ್ಲಿ ನಿವೇದಿಸಿಕೊಂಡಿದ್ದಾರೆ.
ನಂತರ ಬಸಪ್ಪನ ಬಳಿಗೆ ಬಂದ ಗ್ರಾಮದ ಮುಖಂಡರು ಕಳೆದೆರಡು ಮೂರು ತಿಂಗಳ ಹಿಂದೆ ಊರಿನ ಮಾರಮ್ಮದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿದೆ. ನೀನು ಸತ್ಯದ ಬಸಪ್ಪನಾದರೆ ಕಳ್ಳನನ್ನು ಹಿಡಿದು ಸತ್ಯ ನಿರೂಪಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಂತೆ ಮಾರಮ್ಮ ದೇವರ ಅರ್ಚಕ ರಾಜು ಎಂಬುವರ ಮನೆ ಮುಂದೆ ಹೋಗಿ ನಿಂತ ಬಸಪ್ಪನನ್ನು ಕಂಡು ಹುಂಡಿ ಹಣ ಕದ್ದಿದ್ದ ಕಳ್ಳ ಅರ್ಚಕ ರಾಜು ಕಂಗಾಲಾದನು ಎನ್ನಲಾಗಿದೆ.
ಮನೆಯಿಂದ ದೇವಸ್ಥಾನದವರೆಗೂ ಅರ್ಚಕನನ್ನು ತನ್ನ ಕೊಂಬಿನಲ್ಲಿ ತಿವಿಯುತ್ತಾ ಕರೆತಂದ ಬಸಪ್ಪನ ಆಕ್ರೋಷ ಕಂಡ ಕಳ್ಳ ಅರ್ಚಕ ರಾಜು ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು ಬಸಪ್ಪನ ಕಾಲಿಗೆರಗಿ ಕದ್ದಿರುವ ಹುಂಡಿಹಣವನ್ನು ಹಿಂತಿರುಗಿಸುವುದಾಗಿ ಕೈಮುಗಿದು ಕೇಳಿಕೊಂಡ ಬಳಿಕ ಆಕ್ರೋಷಭರಿತನಾಗಿದ್ದ ದೇವರ ಬಸಪ್ಪ ಶಾಂತಗೊಂಡು ತೆರಳಿದ್ದು, ಬಸಪ್ಪನ ಪವಾಡಕಂಡು ಅಚ್ಚರಿಗೊಂಡ ಗ್ರಾಮಸ್ಥರು ತಾಯಿಚಾಮುಂಡೇಶ್ವರಿ ದೇವಿಯ ಮೇಲಿನ ಭಕ್ತಿ ಹಾಗೂ ನಂಬಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss