ಹೊಸದಿಗಂತ ವರದಿ,ತುಮಕೂರು:
ನಾಟಕ ಕಲಾವಿದರು ಸಂಕಷ್ಟದಲ್ಲಿದ್ದಾರೆ ಅವರ ಮಾಸಾಶನವನ್ನು ಹೆಚ್ಚು ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುವಂತಾಗಬೇಕು ಸಿದ್ಧ ಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮಿಯವರು ಅಭಿಪ್ರಾಯ ಪಟ್ಟರು.
ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಇಂದು ನಡೆದ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ರಂಗಭೂಮಿ ಅನಕ್ಷರಸ್ಥರ ವಿಶ್ವ ವಿದ್ಯಾಲಯಅದರ ಸ್ಥಾಪಕ ಕುಲಪತಿಗಳು ಡಾ.ಗುಬ್ಬಿ ವೀರಣ್ಣ ಅವರು.ಅವರ ಕರ್ಮಭೂಮಿಯಲ್ಲಿ ಇಂದು ನಾಟಕ ಅಕಾಡೆಮಿ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಪ್ರಸ್ತುತ
ವಾದುದು ಎಂದರು.
ವರನಟ ಡಾ.ರಾಜ್ ಕುಮಾರ್ ಅವರಂತಹ ಕಲಾವಿದರನ್ನು ಕನ್ನಡ ನಾಡಿಗೆ ನೀಡಿದವರು ಗುಬ್ಬಿ ವೀರಣ್ಣ ಅವರು ಎಂದರು. ದೃಷ್ಟಿ ಇಲ್ಲದೇ ಇದ್ದರೂ ಎಂ.ಎಸ್. ವೇಣುಗೋಪಾಲ್ ಅವರಂತಹ ಕಲಾಕಲಾವಿದರ ಸೇವೆ ಬೆಲೆ ಕಟ್ಟಲಾಗದಂತಹುದು ಎಂದರು. ಸಾಧಕರನ್ನು ಹುಡುಕಿಕೊಂಡು ಪ್ರಶಸ್ತಿಗಳು ಹೋಗಬೇಕೇ ವಿನಹ ಪ್ರಶಸ್ತಿ ಗಳನ್ನು ಬೆನ್ನಟ್ಟಿ ಕಲಾವಿದರು ಹೋಗಬಾರದೆಂದು.ಇಂದು ಪ್ರಶಸ್ತಿಗೆ ಭಾಜನರಾದವರೆಲ್ಲರನ್ನೂ ಪ್ರಶಸ್ತಿಯೇ ಹುಡುಕಿಕೊಂಡು ಹೋಗಿರುವುದು ಹೆಮ್ಮೆ ಪಡುವಂತಹುದು ಎಂದರು.
ನಾಟಕ ಕ್ಷೇತ್ರ ಒಂದು ರೀತಿಯಲ್ಲಿ ಅನಕ್ಷರಸ್ಥರ ಅನೌಪಚಾರಿಕ ಶಿಕ್ಷಣ ಮಾದ್ಯಮದಂತೆ ಎಂದರು. ನಾಟಕ ಕಲೆಗೆ ಪುರಾತನವಾದ ಇತಿಹಾಸ ವಿದೆ.ಆದರೆ ರಂಗದಮೇಲೆ ಎಲ್ಲರನ್ನೂ ಖುಷಿ ಪಡಿಸುವ ಕಲಾವಿದರ ನಿಜ ಜೀವನ ಕಷ್ಟಗಳಿಂದ ಕೂಡಿರುತ್ತದೆ ಅಂತಹವರ ನೆರವಿಗೆ ಸರ್ಕಾರ ಮತ್ತು ಸಮಾಜ ಮುಂದಾಗಬೇಕು ಎಂದರು.