Thursday, August 11, 2022

Latest Posts

ನಾಡ ದೋಣಿಗಳಿಂದ ಮೀನು ಇಳಿಸುವ ವಿಚಾರಕ್ಕೆ ಕೊಡೇರಿ ಬಂದರಿನಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ

ಹೊಸ ದಿಗಂತ ವರದಿ, ಉಡುಪಿ:

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿ ಬಂದರಿನಲ್ಲಿ ನಾಡ ದೋಣಿಗಳಿಂದ ಮೀನು ಇಳಿಸಲು ವಿರೋಧಿಸಿ, ಅಳಿವೆ ಬಾಗಿಲಿನಲ್ಲಿ ಇತ್ತಂಡಗಳ ನಡುವೆ ಗಲಾಟೆ, ಮಾರಾಮಾರಿ ಉಂಟಾಗಿದೆ. ಪರಿಸ್ಥಿತಿ ಕೈಮೀರುವ ಸಂದರ್ಭದಲ್ಲಿ ಪೊಲೀಸರು ಮೀನುಗಾರರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ.
ಕೊಡೇರಿ ಬಂದರಿನಲ್ಲಿ ಕಳೆದ ಕೆಲ ತಿಂಗಳಿಂದ ನಾಡದೋಣಿ ಮೀನುಗಾರರ ನಡುವೆ ಜಟಾಪಟಿ ನಡೆಯುತ್ತಿದೆ. ಉಪ್ಪುಂದ ವ್ಯಾಪ್ತಿಯ ಮೀನುಗಾರರು ಕೊಡೇರಿ ಬಂದರಲ್ಲಿ ಮೀನು ಖಾಲಿ ಮಾಡುತ್ತಿರುವುದು ಗಲಾಟೆಗೆ ಕಾರಣವಾಗಿದೆ. ನಿನ್ನೆ ಬಂದರಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆದಿತ್ತು. ಇಂದು ಉಪ್ಪುಂದ ವ್ಯಾಪ್ತಿಯ ಮೀನುಗಾರರು ಕೊಡೇರಿಗೆ ಮೀನು ಖಾಲಿ ಮಾಡಲು ಆಗಮಿಸಿದ ಸಂದರ್ಭ, ಸ್ಥಳೀಯ ಮೀನುಗಾರರು ಗಲಾಟೆ ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಎರಡು ಗ್ರಾಮಗಳ ಮೀನುಗಾರರು ಕೈ-ಕೈ ಮಿಲಾಯಿಸಿದ್ದಾರೆ. ಸ್ಥಳಕ್ಕೆ ಉಡುಪಿ, ಕುಂದಾಪುರ, ಬೈಂದೂರು ಪೊಲೀಸರು ತೆರಳಿ ಎರಡು ತಂಡಗಳ ಗಲಾಟೆ ತಡೆಯಲು ಪ್ರಯತ್ನಪಟ್ಟಿದ್ದಾರೆ. ಆದರೆ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಎರಡು ತಂಡಗಳು ಪೊಲೀಸರ ಮಾತು ಕೇಳದಿದ್ದಾಗ ಗುಂಪು ಚದುರಿಸಲು ಲಾಠಿ ಬೀಸಿದ್ದಾರೆ. ಕೆಲ ಮೀನುಗಾರರು ದೋಣಿಯಿಂದ ಸಮುದ್ರಕ್ಕೆ ಧುಮುಕಿ ತಪ್ಪಿಸಿಕೊಂಡಿದ್ದಾರೆ. ಮತ್ತೆ ಕೆಲವರು ಲಾಠಿಯೇಟಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕೊಡೇರಿಯಲ್ಲಿ ಬ್ರೇಕ್ ವಾಟರ್ ಕಾಮಗಾರಿ ಹಾಗೂ ಬಂದರಿನಲ್ಲಿ ಜೆಟ್ಟಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೆ ಹೊರ ಭಾಗದ ಮೀನುಗಾರರಿಗೆ ಕೊಡೇರಿ ಬಂದರಿನಲ್ಲಿ ಅವಕಾಶ ಕೊಡಬಾರದು ಎಂಬ ಒತ್ತಾಯ ಸ್ಥಳೀಯ ಮೀನುಗಾರರದ್ದಾಗಿದೆ. ಸ್ಥಳದಲ್ಲಿ ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಎರಡು ಕೆ.ಎಸ್.ಆರ್.ಪಿ. ಹಾಗೂ ನಾಲ್ಕು ಡಿಎಆರ್ ತುಕಡಿಗಳು ಸ್ಥಳದಲ್ಲಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೀನುಗಾರ ಮುಖಂಡರ ಜೊತೆ ಸಭೆ ನಡೆಸಿ, ಶೀಘ್ರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss