ಹೊಸದಿಗಂತ ವರದಿ, ವಿಜಯಪುರ:
ನಾನು ರಾಷ್ಟ್ರೀಯ ನಾಯಕ ಎಂದು ಎಲ್ಲೂ ಹೇಳಿಕೊಂಡಿಲ್ಲ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಹೇಳಿದ್ದು, ನೂರಕ್ಕೆ
ನೂರರಷ್ಟು ಸತ್ಯವಿದೆ. ಅವರು ಒಳ್ಳೆಹ ಸಲಹೆ ಕೊಟ್ಟಿದ್ದಾರೆ, ಅವರಿಗೆ ಅಭಿನಂದಿಸುವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟು ದೊಡ್ಡ ಜ್ಞಾನ, ವಿಚಾರವನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಅವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಾನು ಸ್ವಯಂ ಘೋಷಿತ ರಾಷ್ಟ್ರೀಯ ನಾಯಕನೂ ಅಲ್ಲ, ಸ್ವಯಂ ಘೋಷಿತ ರಾಜ್ಯ ನಾಯಕನೂ ಅಲ್ಲ, ಸ್ವಯಂ ಘೋಷಿತ ಜಿಲ್ಲಾ ನಾಯಕನೂ ಅಲ್ಲ. ನಾನು ಸಾಮಾನ್ಯ ಶಾಸಕನಾಗಿದ್ದು, ಜನರಿಂದ ಜನರಿಗೋಸ್ಕರ ಇದ್ದೇನೆ, ತಮ್ಮದಾರದೂ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ ಎಂದು ಸದಾನಂದಗೌಡರ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದರು.
ಅವರು ಬಹಳ ಹಿರಿಯರಿದ್ದಾರೆ, ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಕೇಂದ್ರದಲ್ಲಿ ರೇಲ್ವೆ, ರಸಗೊಬ್ಬರ ಮಂತ್ರಿಯಾಗಿದ್ದಾರೆ. ಅವರಿಗೆ ನನ್ನ ಮೇಲೆ ಹಕ್ಕು ಇದೆ, ಪ್ರೀತಿ ಇದೆ. ಹಾಗಾಗಿ ಮಾತನಾಡ್ತಾರೆ. ಅವರು ನಾವು 1994 ರಲ್ಲಿ ಶಾಸಕರಾಗಿದ್ದೇವು. ಅವರು ನನಗಿಂತ ಹಿರಿಯರೇನು ಇಲ್ಲಾ. ಆವಾಗ ನಮ್ಮ ಹಿರಿಯರು ಯಡಿಯೂರಪ್ಪ, ಅನಂತಕುಮಾರ, ಡಿ.ಬಿ. ಶಿವಪ್ಪ ಇದ್ದರು. ಸದಾನಂದಗೌಡರು ನಮ್ಮ ಸಮಾನರು, ಹಾಗಾಗಿ ಪ್ರೀತಿ ಜಾಸ್ತಿ ಇರುತ್ತೆ. ಸದಾನಂದಗೌಡರಿಗೆ ನಮ್ಮ ಮೇಲೆ ಮೊದಲಿನಿಂದಲೂ ಪ್ರೀತಿ ಇದೆ, ಅವರು ಈ ಹಿಂದೆ ನನ್ನನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ರು, ಆಗಿನಿಂದ ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಇದೆ ಎಂದರು.
ಈ ಹಿಂದೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಕೇಳಿ ಬಂದಿದ್ದ ವಿಚಾರ ಕುರಿತ ಮಾತನಾಡಿ, ಸದಾನಂದ ಗೌಡರ ಹಣೆ ಬರಹ ಇತ್ತು, ಅವರು ರಾಜ್ಯಾಧ್ಯಕ್ಷರಾದರು, ನನ್ನದು ಹಣೆ ಬರಹ ಇರಲಿಲ್ಲ, ಆಗಲಿಲ್ಲ. ಅವರು ದೈವಿ ಪುರುಷರಿದ್ದಾರೆ, ಎಲ್ಲವನ್ನೂ ಅನುಭವಿಸಿದ್ದಾರೆ, ಬಹಳ ಹಿರಿಯರಿದ್ದಾರೆ. ಅವರು ರಾಷ್ಟ್ರೀಯ ನಾಯಕರಾಗಿದ್ದಾರೆ. ನಮ್ಮಂತ ಸಾಮಾನ್ಯ ಶಾಸಕರ ಬಗ್ಗೆ ಅವರು ಮಾತನಾಡಬಾರದು. ನಾನು ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಮಂತ್ರಿಯಾಗಿದ್ದೆ, ಅವರು ಈಗೀಗ ಮಂತ್ರಿ ಆಗಿದ್ದಾರೆ. ಸೀನಿಯಾರಿಟಿ ಬಗ್ಗೆ ನೀವೆ ಲೆಕ್ಕಾ ಹಾಕಿಕೊಳ್ಳಿ ಎಂದರು.