Saturday, July 2, 2022

Latest Posts

ನಾನು ಹಠ ಹಿಡಿದು ಕೂತಿದ್ದರೆ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುತ್ತಿರಲಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್

ಹೊಸ ದಿಗಂತ ವರದಿ, ಮೈಸೂರು:

ಸಮ್ಮಿಶ್ರ ಸರ್ಕಾರ ಬೀಳಲು ಸಿದ್ಧರಾಮಯ್ಯ ಕಾರಣ ಎಂದು ಆರೋಪಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ನಾನು ಸಮ್ಮಿಶ್ರ ಸರ್ಕಾರ ಬೀಳಿಸಬೇಕು ಅಂತಿದ್ರೆ ಕುಮಾರಸ್ವಾಮಿ ಸಿಎಂ ಆಗೋಕೆ ಬಿಡುತ್ತಿರಲಿಲ್ಲ. ನಾನು ಕುಮಾರಸ್ವಾಮಿ ಬೇಡ ಅಂತ ಹಠ ಹಿಡಿದು ಕೂತಿದ್ದರೆ ಕುಮಾರಸ್ವಾಮಿ ಸಿಎಂ ಆಗುತ್ತಿರಲಿಲ್ಲ. ಆದರೆ ಇವನು ತಾಜ್‌ವೆಸ್ಟೆಂಡ್ ಹೊಟೇಲ್ ಕೂತ್ಕೊಂಡು ಅಧಿಕಾರ ಕಳ್ಕೊಂಡ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಏಕ ವಚನದಲ್ಲಿಯೇ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ಶುಕ್ರವಾರ ಮೈಸೂರಿನ ಅರವಿಂದ ನಗರದಲ್ಲಿರುವ ಕಾಲ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ನಿಂದ ಏರ್ಪಡಿಸಲಾಗಿದ್ದ
ಚಾಮುಂಡೇಶ್ವರಿ ಕ್ಷೇತ್ರ ಗ್ರಾಮ ಜನಾಧಿಕಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ, ಶಾಸಕರಿಗೆ ಸೂಕ್ತವಾಗಿ ಸ್ಪಂದಿಸಿದ್ದರೆ, ನಮ್ಮ ಎಂಎಲ್‌ಎಗಳು ಯಾರೂ ಬಿಜೆಪಿಗೆ ಹೋಗುತ್ತಿರಲಿಲ್ಲ. ಆದರೆ ಕುಣಿಯಲಾರದವವಳು ನೆಲ ಡೋಂಕು ಅಂದಾಗೆ ಮಾತನಾಡುತ್ತಾನೆ. ಒಂದು ಕಡೆ ನನಗೆ ಸರ್ಕಾರ ಬೀಳುತ್ತೆ ಅಂತ ಗೊತ್ತಿತ್ತು, ಅದಕ್ಕೆ ಫಾರಿನ್ ಗೆ ಹೋದೆ ಅಂತಾನೆ. ಇನ್ನೊಂದು ಕಡೆ ಸಿದ್ದರಾಮಯ್ಯ ಬೀಳುಸ್ತಾ ಅಂತಾನೆ. ಇವನಿಗೆ ರಾಜಕೀಯ ಪ್ರಬುದ್ದತೆ ಇದೆಯಾ. ಎಂಎಲ್‌ಎ ಗಳನ್ನ ಸರಿಯಾಗಿ ನಡೆಸಿಕೊಂಡಿದ್ದರೆ ಈ ರೀತಿ ಆಗ್ತಿರಲಿಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ನನ್ನ ಅಧಿಕಾರದ ಅವಧಿಯಲ್ಲಿ 162ಕೋಟಿ ಖರ್ಚು ಮಾಡಿ ಜಾತಿವಾರು ಸಮೀಕ್ಷೆ ಮಾಡಿಸಿದ್ದೆ. ಆದರೆ ಅದನ್ನ ಆ ಮೇಲೆ ಕೊಡುತ್ತೇನೆ ಇನ್ನು ಸಮೀಕ್ಷೆ ಪೂರ್ಣ ಆಗಿಲ್ಲ ಅಂದರು. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಬಳಿಕ ಅದನ್ನ ತೆಗೆದುಕೊಳ್ಳಬೇಡ ಎಂದರು. ಆ ವೇಳೆ ಪುಟ್ಟರಂಗ ಶೆಟ್ಟಿ ಹಿಂದೂಳಿದ ವರ್ಗಗಳ ಸಚಿವ ಆಗಿದ್ದರು. ಪುಟ್ಟರಂಗಶೆಟ್ಟಿಯನ್ನ ಬೆದರಿಸಿ ತಗೋಬೇಡ ಅದನ್ನ ಅಂದರು. ಅದು ಹೊರಗೆ ಬಂದರೆ, ಕೆಳಗಿರುವ ಜನರು ಮೇಲೆ ಬರ್ತಾರೆ. ಯಾವ ಯಾವ ವರ್ಗಕ್ಕೆ ಏನು ಕೆಲಸ ಆಗಿದೆ ಅಂತ ಗೊತ್ತಾಗ್ತಿತ್ತು. ಆದರೆ ಅದನ್ನ ಹೊರಗೆ ತರುವ ಕೆಲಸ ಬಿಜೆಪಿ, ಜೆಡಿಎಸ್ ಮಾಡಲಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಗೋಮಾತೆ ಪೂಜೆ ಮಾಡುವ ನಾಯಕರು ಯಾವತ್ತಾದ್ರು ಸಗಣಿ ಎತ್ತಿದ್ದಾರಾ?
ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಬಡಕಲು, ವಯಸ್ಸಾದ ಹಸುಗಳನ್ನ ರೈತರು ಏನ್ ಮಾಡಬೇಕು. ಇದನ್ನ ಪ್ರಶ್ನಿಸಿದರೆ, ಸಚಿವ ಆರ್. ಅಶೋಕ ನಮ್ಮ ಮನೆಗೆ ಕಳಿಸಿ ಅಂತಾರೆ, ದುಡ್ಡು ಕೊಟ್ಟು ತಕೊಳಪ್ಪ ಅಂದರೆ ಉಸಿರಿಲ್ಲ. ಗೋಮಾತೆ ಪೂಜೆ ಮಾಡುವ ನಾಯಕರು ಯಾವತ್ತಾದ್ರು ಸಗಣಿ ಎತ್ತಿದ್ದಾರಾ..? ಮೇಯಿಸಿ, ಹುಲ್ಲು ಹಾಕಿ, ಹಾಲು ಕರೆದು ಡೈರಿಗೆ ಹಾಕಿದ್ದಾರಾ ಎಂದು ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದರು.
ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಸೋಲಿಸಬೇಕು ಅನ್ನೊದಾದರೆ, ಒಬ್ಬಬ್ಬರು ಮಾತ್ರ ಚುನಾವಣೆಗೆ ನಿಲ್ಲಿ. ನೀವೇ ಮೂರು ಮೂರು ಜನ ಚುನಾವಣೆಗೆ ನಿಲ್ಲಬೇಡಿ. ನಮ್ಮ ಕಾರ್ಯಕರ್ತರು ಈ ಬಗ್ಗೆ ಗಮನ ಹರಿಸಬೇಕು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಸೂಚಿಸಿದರು.
ಚಾಮುಂಡೇಶ್ವರಿ ಪರ್ಯಾಯ ಲೀಡರ್ ಬಗ್ಗೆ ಚಿಂತೆ ಬಿಡಿ. ಚಾಮುಂಡೇಶ್ವರಿಯಲ್ಲಿ ಎಂ ಎಲ್ ಎ ಆಗಲಿಕ್ಕೆ ಸಾಕಷ್ಟು ಜನರಿಗೆ ಆರ್ಹತೆ ಇದೆ. ಈ ಬಾರಿ ಎಲ್ಲ ಪಂಚಾಯತಿಗಳನ್ನು ಗೆದ್ದು ಬರಬೇಕು. ಶನಿವಾರದಿಂದಲೇ ಎಲ್ಲರೂ ಕ್ಯಾಂಪೇನ್ ಆರಂಭ ಮಾಡಿ ಎಂದು ಕರೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss